ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೋಯ್ಡಾ ಬಾಲಕಿ ಅರುಷಿ ಮೊಬೈಲ್ ಪತ್ತೆ (Noida | Arushi | Mobile | Delhi Police)
 
PTI
ನೊಯ್ಡಾದಲ್ಲಿ 2008ರ ಮೇ ತಿಂಗಳಲ್ಲಿ ನಿಗೂಢವಾಗಿ ಕೊಲೆಯಾಗಿರುವ ಬಾಲಕಿ ಆರುಷಿ ತಲ್ವಾರ್‌ಳ ಮೊಬೈಲನ್ನು ವಶ ಪಡಿಸಿಕೊಳ್ಳುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅರುಷಿ ಹಾಗೂ ಆಕೆಯ ಮನೆ ಕೆಲಸದಾಳು ಹೇಮರಾಜ್ ಎಂಬಾತ ನಿಗೂಢವಾಗಿ ಕೊಲೆಯಾಗಿದ್ದು, ಪ್ರಕರಣ ಇಡೀ ರಾಷ್ಟ್ರದಲ್ಲೇ ಸಂಚಲನ ಮೂಡಿಸಿತ್ತು. ಇದೀಗ ಮೊಬೈಲ್ ಪತ್ತೆಯಾಗಿರುವುದರಿಂದ ಪ್ರಕರಣದ ತನಿಖೆಗೆ ಮಹತ್ತರ ತಿರುವು ಲಭಿಸಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ಮೊಬೈಲ್ ವಶ ಪಡಿಸಿಕೊಂಡಿದ್ದು, ಅದನ್ನು ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ದಿನದಿಂದ ಬಾಲಕಿಯ ಮೊಬೈಲ್ ನಾಪತ್ತೆಯಾಗಿದ್ದು, ಅದು ಈಗ ಸಿಕ್ಕಿರುವುದರಿಂದ ಕೊಲೆಗೆ ಸಂಬಂಧಿಸಿದಂತೆ ಮಹತ್ತರವಾದ ಸುಳಿವು ದೊರೆಯುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸ್ ವಕ್ತಾರ ರಾಜನ್ ಭಗತ್ ತಿಳಿಸಿದ್ದಾರೆ.

ಅರುಷಿ ಕುಟುಂಬದಲ್ಲಿ ಮನೆಗೆಲಸಕ್ಕಿದ್ದ ಮಹಿಳೆಯೊಬ್ಬಳು ಈ ಮೊಬೈಲನ್ನು ಉತ್ತರ ಪ್ರದೇಶದ ನಿವಾಸಿಯೊಬ್ಬರಿಗೆ ಹಸ್ತಾಂತರಿಸಿರುವುದಾಗಿ ಬುಲಂದ್‌ಶಹರ್‌ ಎಸ್ಪಿ ಜೆ.ಕೆ. ಸಾಹಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಅರುಷಿ ನೋಯ್ಡಾದ ಸೆಕ್ಟರ್ 25ರಲ್ಲಿರುವ ಜಲ್ವಾಯು ವಿಹಾರ ಅಪಾರ್ಟ್‌ಮೆಂಟಿನಲ್ಲಿ 2008ರ ಮೇ 16ರಂದು ಕೊಲೆಯಾಗಿದ್ದಳು. ಈಕೆಯನ್ನು ಮನೆಗೆಲಸದಾಳು ಹೇಮರಾಜ್ ಕೊಲೆ ಮಾಡಿರಬಹುದೆಂದು ತಕ್ಷಣಕ್ಕೆ ಸಂಶಯಿಸಿಲಾಗಿತ್ತು. ಆದರೆ ಮರುದಿನ ರಾತ್ರಿ ಹೇಮರಾಜ್ ಸಹ ಮನೆಯ ತಾರಸಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಅರುಷಿಯ ತಂದೆ ದಂತವೈದ್ಯ ರಾಜೇಶ್ ತಲ್ವಾರ್, ಆತನ ವೈದ್ಯಕೀಯ ಸಹಾಯಕ ಕೃಷ್ಣ, ಹಾಗೂ ನೆರೆಮನೆಯಲ್ಲಿ ಮನೆಗೆಲಸಕ್ಕಿದ್ದ ರಾಜ್ ಕುಮಾರ್ ಹಾಗೂ ವಿಜಯ್ ಮಂಡಲ್ ಎಂಬವರುಗಳನ್ನು ಪ್ರಕರಣದ ಕುರಿತು ಬಂಧಿಸಲಾಗಿತ್ತು. ಆದರೆ, ಎಲ್ಲಾ ಆರೋಪಿಗಳೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಿದೆ. ಭಾರೀ ಹುಡುಕಾಟ ನಡೆಸಿದರೂ, ಅರುಷಿ ಹಾಗೂ ಹೇಮರಾಜ್‌ನ ಮೊಬೈಲ್‌ಗಳು ಪತ್ತೆಯಾಗಿರಿಲಿಲ್ಲ. ಅಲ್ಲದೆ ಇವರಿಬ್ಬರನ್ನು ಕತ್ತು ಸೀಳಿ ಕೊಲೆಮಾಡಲು ಬಳಸಿರುವ ಆಯುಧವೂ ಸಿಕ್ಕಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ