ಬಿಹಾರದ 11 ಕ್ಷೇತ್ರಗಳಲ್ಲಿ ಮಂಗಳವಾರ ಉಪಚುನಾವಣೆ ನಡೆಯುತ್ತಿದ್ದು, ಬಿಗಿ ಭದ್ರತೆ ನಡುವೆ ಮತದಾನ ನಡೆಯುತ್ತಿದೆ. ಬಿಹಾರದ 18 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು ದ್ವಿತೀಯ ಹಂತದ ಮತದಾನ ಮುಂಜಾನೆ ಆರಂಭಗೊಂಡಿದೆ.
ಮುಂಜಾನೆಯಿಂದಲೇ ಮತದಾನ ನಡೆಯುತ್ತಿದ್ದು ಹಲವು ಮತಕೇಂದ್ರಗಳಲ್ಲಿ ಸಣ್ಣಸಣ್ಣ ಸರತಿಸಾಲುಗಳು ಕಂಡು ಬರುತ್ತಿವೆ. ಬಾಘ, ನೌತಾನ್, ಬೆಗುಸರಾಯ್, ತ್ರಿವೇಣಿಗಂಜ್, ಸಿಮ್ರಿ ಭಕ್ತಿಯಾರ್‌ಪುರ, ಅರಾರಿಯ, ಧೋರಾರಿಯ, ಮುಂಗೇರ್, ಫುಲ್ವಾರಿ, ಗೋಶಿ ಮತ್ತು ಬೋಧ್‌ಗಯಾದ 2,620 ಮತಕೇಂದ್ರಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದು ಕೇಂದ್ರೀಯ ಅರೆಸೇನಾ ಪಡೆಗಳು ಭದ್ರತಾ ಕಾರ್ಯ ಕೈಗೊಂಡಿವೆ.
ಚುನಾವಣೆ ನಡೆಯುತ್ತಿರುವ 11 ಕ್ಷೇತ್ರಗಳಲ್ಲಿ ಒಂಬತ್ತು ಮಹಿಳೆಯರೂ ಸೇರಿದಂತೆ 99 ಅಭ್ಯರ್ಥಿಗಳು ಕಣದಲ್ಲಿದ್ದು, 25,15,474 ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಆಡಳಿತಾರೂಢ ಜೆಡಿಯು ಬಾಘಾ, ನೌತಾನ್, ಧೋರಾರಿಯ, ತ್ರಿವೇಣಿಗಂಜ್, ಫುಲ್ವಾರಿ, ಗೋಶಿ, ಸಿಮ್ರಿ ಭಕ್ತಿರಾರ್‌ಪುರ ಹಾಗೂ ಮುಂಗೇರ್ ಕ್ಷೇತ್ರಗಳಲ್ಲಿ ಸ್ಫರ್ಧೆಗಿಳಿದಿದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಅದರ ಮಿತ್ರಪಕ್ಷವಾದ ಬಿಜೆಪಿ ಕಣಕ್ಕಿಳಿದಿದೆ. ಕಾಂಗ್ರೆಸ್ ಎಲ್ಲಾ 11 ಕ್ಷೇತ್ರಗಳಲ್ಲಿ ಸ್ಫರ್ಧಿಸಿದ್ದರೆ, ಮಿತ್ರಪಕ್ಷಗಳಾದ ಆರ್‌ಜೆಡಿ ಹಾಗೂ ಎಲ್‌ಜೆಪಿಗಳು ಅನುಕ್ರಮವಾಗಿ ತಲಾ ಏಳು ಹಾಗೂ ನಾಲ್ಕು ಸ್ಥಾನಗಳನ್ನು ಹಂಚಿಕೊಂಡು ಸ್ಫರ್ಧಿಸುತ್ತಿವೆ.