ವಿವಾಹಪೇಕ್ಷಿತ ಗಂಡು ಹೆಣ್ಣುಗಳು ವಿವಾಹಕ್ಕೆ ಮುಂಚಿತವಾಗಿಯೇ ಪುಂಸತ್ವ ಪರೀಕ್ಷೆಗೆ ಒಳಪಡಬೇಕು ಎಂಬುದಾಗಿ ಖ್ಯಾತ ತಮಿಳು ನಟಿ ಮನೋರಮಾ ಸಲಹೆ ನೀಡಿದ್ದಾರೆ. ಮಹಿಳೆ ಹಾಗೂ ಪುರುಷರಿಬ್ಬರೂ ಪರೀಕ್ಷೆಗೊಳಪಟ್ಟು ಲೈಂಗಿಕವಾಗಿ ಸಮರ್ಥರು ಎಂಬುದಾಗಿ ವೈದ್ಯಕೀಯ ದೃಢಪತ್ರವನ್ನು ವಿವಾಹಕ್ಕೆ ಮುಂಚಿತವಾಗಿ ಪ್ರಸ್ತುತಪಡಿಸಬೇಕು ಎಂಬುದಾಗಿ ಅವರು ಪ್ರತಿಪಾದಿಸಿದ್ದಾರೆ.
"ವಿವಾಹ ಆಕಾಂಕ್ಷಿ ವರನು ತಾನು ಸಮರ್ಥ ಹಾಗೂ ಎಚ್ಐವಿ ಸೋಂಕು ಹೊಂದಿಲ್ಲ ಎಂಬ ಸರ್ಟಿಫಿಕೇಟ್ ಹೊಂದಿರಬೇಕು. ಅಂತೆಯೇ ಮಹಿಳೆಯೂ ಸಹ ತಾನು ಫಲವತ್ತಳು ಮತ್ತು ಎಚ್ಐವಿ ಸೋಂಕಿತಳಲ್ಲ ಎಂಬ ಸರ್ಟಿಫಿಕೇಟ್ ಹೊಂದಿರಬೇಕು ಎಂದಿದ್ದಾರೆ. ಒಂದೊಮ್ಮೆ ವೈದ್ಯರು ಸುಳ್ಳು ಸರ್ಟಿಫಿಕೇಟ್ ಏನಾದರೂ ಕೊಟ್ಟಲ್ಲಿ ಅಂತಹವರನ್ನು ಜೈಲಿಗೆ ತಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ತಮ್ಮ ಈ ಪ್ರಸ್ತಾಪಗಳು ಕಾನೂನಾಗಬೇಕು ಎಂಬ ಚಳುವಳಿ ಹೂಡಲು ಮನೋರಮಾ ಅವರು ಟ್ರಸ್ಟ್ ಒಂದನ್ನು ರೂಪಿಸುವ ಚಿಂತನೆಯನ್ನೂ ನಡೆಸಿದ್ದಾರೆ. ಮನೋರಮಾ ಅವರ ಚಿಂತನೆಯನ್ನು ವೈದ್ಯರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸ್ವಾಗತಿಸಿದ್ದಾರಾದರೂ, ಇದರಲ್ಲಿರುವ ಎಡರುತೊಡರುಗಳ ಕುರಿತು ಎಚ್ಚರಿಕೆಯನ್ನೂ ನೀಡಿದ್ದಾರೆ.
"ವೈದ್ಯಕೀಯ ಪರೀಕ್ಷೆ ಎಂದರೆ, ಮಹಿಳೆಯು ತಾನು ಇನ್ನೂ ಕನ್ಯೆಯೇ ಅಥವಾ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಸಾಕಷ್ಟು ಪ್ರೌಢಳಾಗಿದ್ದಾಳೆಯೇ, ಆಕೆ ಮೈ ನೆರೆದಿದ್ದಾಳೆಯೇ ಮುಂತಾದ ಎಲ್ಲಾ ವಿಚಾರಗಳೂ ಸಹ ಹೊರಬರಲಿವೆ" ಎಂಬುದಾಗಿ ರಾಜ್ಯ ಪಿಯುಸಿಎಲ್ ಅಧ್ಯಕ್ಷೆ ಸುಧಾ ರಾಮಲಿಂಗಂ ಹೇಳಿದ್ದಾರೆ.
ಈ ಕುರಿತು ವೈದ್ಯರೂ ಸ್ಪಷ್ಟವಾಗಿಲ್ಲ. "ವೈದ್ಯಕೀಯ ಸರ್ಟಿಫಿಕೇಟ್ ಅಂದರೆ ಅದರಲ್ಲಿ ನಿಜವಾಗಿಯೂ ಏನಿರಬೇಕು. ಇದೊಂದು ಲೈಂಗಿಕ ಸಾಮರ್ಥ್ಯ ಪರೀಕ್ಷೆಯೇ? ಆಥವಾ ಫಲವತ್ತತೆಯ ಸಾಮರ್ಥ್ಯದ ಪರೀಕ್ಷೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಇದೊಂದು ಬರಿಯ ಲೈಂಗಿಕ ಸಾಮರ್ಥ್ಯ ಪರೀಕ್ಷೆ ಎಂಬುದಾಗಿ ಊಹಿಸುವುದಾದರೆ, ಒಬ್ಬ ವ್ಯಕ್ತಿ ಸಮರ್ಥನೋ ಇಲ್ಲ ಅಸಮರ್ಥನೋ ಎಂಬ ಕುರಿತು ಯಾವ ಆಧಾರದಲ್ಲಿ ಸರ್ಟಿಫಿಕೇಟ್ ನೀಡಬೇಕು" ಎಂಬುದಾಗಿ ಲೈಂಗಿಕ ತಜ್ಞ ನಾರಾಯಣ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ವ್ಯಕ್ತಿಗತವಾದ ಅಸ್ವಸ್ಥತೆ ಅಥವಾ ಸಲಿಂಗ ರತಿಯಂತಹ ವಿಚಾರಗಳು ಅತ್ಯಂತ ಸಂಕೀರ್ಣವಾಗಿದ್ದು ಇಂತಹ ವ್ಯಕ್ತಿಗಳು ತಾವಾಗಿ ಹೇಳಿಕೊಳ್ಳದಿದ್ದರೆ ಅದನ್ನು ಪತ್ತೆ ಮಾಡುವುದು ಬಲು ಕಷ್ಟಕರ ಎಂಬುದಾಗಿಯೂ ವೈದ್ಯರು ಹೇಳುತ್ತಾರೆ.
ಆದರೆ ಪುಂಸತ್ವದ ಸರ್ಟಿಫಿಕೇಟ್ ಪ್ರಸ್ತುತಿಯ ಚಳುವಳಿಗೆ ತಯ್ಯಾರಿ ನಡೆಸಿರುವ ಮನೋರಮಾ ಅವರು ಈ ಕುರಿತು ಶಾಸನಕ್ಕಾಗಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಲು ಮುಂದಾಗಿದ್ದಾರೆ.