ಇತ್ತೀಚಿನ ದಿನಗಳಲ್ಲಿ ಗಡಿಯುದ್ದಕ್ಕೂ ಅಕ್ರಮ ನುಸುಳುವಿಕೆ ಹೆಚ್ಚಿದೆ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳು ನ್ಯೂಯಾರ್ಕಿನಲ್ಲಿ ಭೇಟಿಯಾಗಲಿರುವ ಕೆಲವೆ ದಿನಗಳಿಗೆ ಮುಂಚಿತವಾಗಿ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.
"ಗಡಿನಿಯಂತ್ರಣ ರೇಖೆಯುದ್ದಕ್ಕೂ ಮತ್ತು ನೇಪಾಳ, ಬಾಂಗ್ಲಾದೇಶ ಗಡಿಗಳು ಮತ್ತು ಸಮುದ್ರ ಭಾಗಗಳಲ್ಲಿ ಅಕ್ರಮ ನುಸುಳುವಿಕೆ ಹೆಚ್ಚುತ್ತಿದೆ" ಎಂಬುದಾಗಿ ಮನಮೋಹನ್ ಸಿಂಗ್ ಅವರು ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ ಡಿಜಿಪಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಾ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಉಗ್ರರು ಏಖ ಉದ್ದೇಶಕ್ಕಾಗಿ ರಾಜ್ಯದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ಮೂಡಿಸಲು ಪ್ರಯತ್ನಿಸುತ್ತಿದ್ದು ಇಂತಹ ವಾತಾವರಣ ಬೆಳೆಯಲು ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಉಗ್ರರು ಹಾಗೂ ಅಕ್ರಮನುಸುಳುವಿಕೆದಾರರೊಂದಿಗೆ ಗುಂಡಿನ ಕಾದಾಟ ಹೆಚ್ಚುತ್ತಿದ್ದು, ಇದು ಉಗ್ರವಾದಿ ಸಂಘಟನೆಗಳು ಭಾರತದೊಳಕ್ಕೆ ನುಸುಳಲು ಪ್ರತ್ನಿಸುತ್ತಿರುವುದರ ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ.
ನಕ್ಸಲ್ ಸಮಸ್ಯೆ ಅತಿದೊಡ್ಡ ಬೆದರಿಕೆ ಇದೇವೇಳೆ, ರಾಷ್ಟ್ರದ ಆಂತರಿಕ ಭದ್ರತೆಗೆ ನಕ್ಸಲ್ ಸಮಸ್ಯೆಯೊಂದು ಬಹುದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದ ಪ್ರಧಾನಿಯವರು ಇದು ಗಡಿಯಾದ್ಯಂತದ ಭಯೋತ್ಪಾದನೆ ಸಮಸ್ಯೆಗಿಂತಲೂ ಅಧಿಕವಾಗಿದೆ ಎಂದು ಬೆಟ್ಟು ಮಾಡಿದರು. ನಕ್ಸಲರನ್ನು ಮಟ್ಟಹಾಕುವಲ್ಲಿ ನಾವು ಸೋಲಿನಷ್ಟು ಯಶಸ್ಸನ್ನು ಗಳಿಸಿಲ್ಲ ಎಂದವರು ಮಾರ್ಮಿಕವಾಗಿ ನುಡಿದರು.
ಭಯೋತ್ಪಾದನೆಯ ವಿರುದ್ಧ ನಿಗಾ ವಹಿಸುವಲ್ಲಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಸಿಂಗ್, ಕಳೆದೊಂದು ವರ್ಷದಲ್ಲಿ ಅತಿಹೆಚ್ಚು ಯಶಸ್ಸನ್ನು ಸಾಧಿಸಲಾಗಿದೆ ಎಂದರು. ಹಲವು ಭಯೋತ್ಪಾದನಾ ಸಂಘಟನೆಗಳನ್ನು ಧ್ವಂಸಮಾಡಲಾಗಿದೆ. ಹಲವಾರು ಪ್ರಮುಖ ಬಂಧನಗಳಾಗಿವೆ. ನಿಮ್ಮ ಎಚ್ಚರಿಕೆಯ ಪಹರೆಯಿಂದಾಗಿ ಮುಂಬೈ ದಾಳಿಯ ಬಳಿಕ ಯಾವುದೇ ದೊಡ್ಡ ಉಗ್ರವಾದಿ ದಾಳಿಗಳು ನಡೆದಿಲ್ಲ ಎಂದು ಅವರು ನುಡಿದರು.