ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಿತವ್ಯಯದ ಹಾದಿ ಹಿಡಿದಿರುವ ಅವರ ಪುತ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಂಗಳವಾರ ಲುಧಿಯಾನಕ್ಕೆ ಶತಾಬ್ದಿ ರೈಲಿನ ಚೇರ್‌ಕಾರ್‌ನಲ್ಲಿ ಪ್ರಯಾಣಿಸಿದರು.
ಮುಂಬೈಗೆ ತೆರಳುವವೇಳೆ ಕಮರ್ಷಿಯಲ್ ವಿಮಾನದ ಸಾಮಾನ್ಯದರ್ಜೆಯಲ್ಲಿ ಸೋನಿಯಾಗಾಂಧಿ ಪ್ರಯಾಣಿಸಿದ ಮರುದಿನ ರಾಹುಲ್ ರೈಲು ಪ್ರಯಾಣ ಮಾಡಿದ್ದಾರೆ. ದೆಹಲಿ ರೈಲು ನಿಲ್ದಾಣದಿಂದ ಲೂಧಿಯಾನಕ್ಕೆ ಪ್ರಯಾಣ ಬೆಳೆಸಿದರು.
ರೈಲುನಿಲ್ದಾಣದಲ್ಲಿ ರಾಹುಲ್‌ಗೆ ನೀಡಿದ ಪುಷ್ಪಗುಚ್ಚವನ್ನು, ಇದು ಎಕ್ಸಿಕ್ಯೂಟಿವ್ ದರ್ಜೆಯ ಪ್ರಯಾಣಿಕರಿಗೆ ಸಲ್ಲಬೇಕಾದ್ದು ಎನ್ನುತ್ತಾ ನಯವಾಗಿ ನಿರಾಕರಿಸಿದ ಅವರು ಇತರ ಪ್ರಯಾಣಿಕರಂತೆಯೇ ತನಗೂ ಸಹ ಪ್ಲಾಸ್ಟಿಕ್ ಲೋಟದಲ್ಲಿಯೇ ನೀರು ನೀಡುವಂತೆ ಒತ್ತಾಯಿಸಿದರು.
ಕಾಂಗ್ರೆಸ್‌ನ ಯುವ ನಾಯಕನೂ ತಾವು ಪ್ರಯಾಣಿಸುತ್ತಿರುವ ರೈಲಿನಲ್ಲಿ ಪ್ರಯಾಣಿಸುತ್ತಿರುವ ವಿಚಾರ ತಿಳಿದ ಇತರ ಪ್ರಯಾಣಿಕರು ಅಚ್ಚರಿಯ ಸಂತೋಷ ಅನುಭವಿಸಿದರು.
ರಾಹುಲ್ ಗಾಂಧಿಗೆ ಪರೋಟ, ಮೊಸರು, ಇಡ್ಲಿ, ವಡಾ ಮತ್ತು ಹಣ್ಣುಗಳನ್ನು ನೀಡಿರುವುದಾಗಿ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಇದು ರಾಹುಲ್‌ಗೆ ವಿಶೇಷವಾಗಿ ನೀಡುವ ಆಹಾರವಾಗಿದ್ದು, ಅವರು ಇನ್ನೇನಾದರೂ ಬಯಸಿದರೆ ಸಂತೋಷದಿಂದ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.