ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಿ: ಕರುಣಾ (Karunanidhi | state autonomy | DMK demand)
 
PTI
ರಾಜ್ಯಗಳಿಗೆ ಸ್ವಾಯತ್ತತೆ ಹಾಗೂ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ಡಿಎಂಕೆಯ ಬೇಡಿಕೆಯನ್ನು ಮತ್ತೆ ಕೆದಕಿರುವ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಈ ಕುರಿತ ಅಡೆತಡೆಗಳನ್ನು ತೊಡೆದು ಹಾಕಬೇಕು ಮತ್ತು ತಮಿಳಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂಬುದಾಗಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.

"ಈ ಪ್ರಕ್ರಿಯೆಯಲ್ಲಿರುವ ಎಡರುತೊಡರುಗಳನ್ನು ಕೇಂದ್ರವು ನಿವಾರಿಸಿ ರಾಜ್ಯಗಳಿಗೆ ಸ್ವಾಯತ್ತತೆ ನೀಡುವ ಕುರಿತು ಕಾರ್ಯಕೈಗೊಳ್ಳಬೇಕು" ಎಂಬುದಾಗಿ ಕರುಣಾನಿಧಿ ಹೇಳಿದ್ದಾರೆ. ಅವರು ಡಿಎಂಕೆ ಸಂಸ್ಥಾಪಕ ಅಣ್ಣಾದುರೈ ಅವರ ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.

ಪಶ್ಚಿಮಬಂಗಾಳದಲ್ಲಿ ಪ್ರಾದೇಶಿಕ ಪಕ್ಷದ ಮುಖಂಡನಾಗಿದ್ದ ವೇಳೆ 70ರ ದಶಕದ ಆರಂಭದಲ್ಲಿ ಪ್ರಣಬ್ ಮುಖರ್ಜಿ ಅವರು, "ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಿದಾಗ ಮಾತ್ರ ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆ ಸುಭದ್ರವಾಗಿರಲು ಸಾಧ್ಯ" ಎಂಬುದಾಗಿ ಹೇಳಿದ್ದನ್ನು ಈ ಸಂದರ್ಭದಲ್ಲಿ ಕರುಣಾನಿಧಿ ನೆನಪಿಸಿದರು. ಕರುಣಾನಿಧಿ ಅವರ ಡಿಎಂಕೆ ಪಕ್ಷವು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾಗಿದೆ.

ಕೇಂದ್ರವು ರಾಜ್ಯಗಳ ಹಕ್ಕನ್ನು ಕಸಿಯುವುದನ್ನು ತಡೆಯಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಲಭಿಸುವಂತಾಗಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಆಗ ಮುಖರ್ಜಿಯವರು ಒತ್ತಾಯಿಸಿದ್ದರು ಎಂಬುದಾಗಿ ಹೇಳಿದ ಕರುಣಾನಿಧಿ, "ಈಗ ನೀವು ನಮಗೆ ಹೆಚ್ಚು ಅಧಿಕಾರವನ್ನು ನೀಡುವಂತಹ ಹುದ್ದೆಯಲ್ಲಿದ್ದೀರಿ" ಎಂದು ಮುಖರ್ಜಿಯವರನ್ನು ವಿನಂತಿಸಿದರು.

ಪ್ರಣಬ್ ಮುಖರ್ಜಿ ಅವರು ಅಣ್ಣಾದುರೈ ಸ್ಮರಣಾರ್ಥ ಆರ್‍ಬಿಐ ಹೊರತಂದಿರುವ ನಾಣ್ಯಗಳನ್ನು ಪ್ರಣಬ್ ಮುಖರ್ಜಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಭಾಷಾ ವಿರೋಧಿಯಲ್ಲ
ಡಿಎಂಕೆಯು ಹಿಂದಿ ಸೇರಿದಂತೆ ಯಾವುದೇ ಭಾಷೆಯ ವಿರೋಧಿಯಲ್ಲ, ಆದರೆ ಅದು ಯಾವುದೇ ಭಾಷೆಯ ಹೇರಿಕೆಯನ್ನು ವಿರೋಧಿಸುತ್ತದೆ. ಇದೀಗ ತಮಿಳನ್ನು ರಾಷ್ಟ್ರದ ಅಧಿಕೃತ ಭಾಷೆಗಳಲ್ಲೊಂದನ್ನಾಗಿಸಲು ಕಾಲ ಪಕ್ವವಾಗಿದೆ. ಇದು ಅಣ್ಣಾದುರೈ ಅವರಿಗೆ ತುಂಬ ಇಷ್ಟದ ಕಾರ್ಯವಾಗಿದೆ ಎಂದು ನುಡಿದರು.

ಅಣ್ಣಾ ದುರೈ ಒಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದರು ಎಂದು ನೆನಪಿಸಿಕೊಂಡ ಮುಖರ್ಜಿ ರಾಜ್ಯ ಸಭೆಯಲ್ಲಿ ಅವರ ಭಾಷಣ ನಿಗದಿಯಾಗಿದ್ದರೆ ಅದನ್ನು ಆಲಿಸಲು ಅಂದು ಎಲ್ಲಾ ಸದಸ್ಯರು ಹಾಗೂ ಸಚಿವರು ಹಾಜರಿರುತ್ತಿದ್ದರು ಎಂಬುದಾಗಿ ಸ್ಮರಿಸಿದರು. ತಮಿಳ್ನಾಡು ರಾಷ್ಟ್ರದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಒಂದು ವರ್ಷಗಳ ಕಾಲ ಆಚರಣೆ ನಡೆಸಲಾದ ಅಣ್ಣಾದುರೈ ಜನ್ಮಶತಾಬ್ಧಿ ಕಾರ್ಯಗಳು ಮಂಗಳವಾರಕ್ಕೆ ಸಮಾಪನಗೊಂಡಿತು. ತಮಿಳ್ನಾಡಿನ ಪ್ರಮುಖ ವಿರೋಧಪಕ್ಷವಾಗಿರುವ ಎಐಎಡಿಎಂಕೆಯೂ ಸಹ ಅಣ್ಣಾದುರೈ ಅವರ ಜನ್ಮ ಶತಾಬ್ಧಿಯನ್ನು ಆಚರಿಸಿತು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ