ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿಹೊಂದಿದ್ದಾರೆ ಎಂಬುದಾಗಿ ಮಾಡಲಾಗಿರುವ ಆಪಾದನೆಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ(ಸಿಜೆಐ) ಕೆ.ಜಿ. ಬಾಲಕೃಷ್ಣನ್ ಸೂಚಿಸಿದ್ದಾರೆ. ಇದರಿಂದಾಗಿ ನ್ಯಾಯಮೂರ್ತಿ ದಿನಕರನ್ ತೊಂದರೆಗೆ ಸಿಲುಕಿದ್ದಾರೆ.
ದಿನಕರನ್ ವಿರುದ್ಧ ಮಾಡಲಾಗಿರುವ ಆಪಾದನೆಗಳಿಗೆ ಉತ್ತರ ನೀಡಲು ಶನಿವಾರ ದೆಹಲಿಗೆ ತೆರಳುವಂತೆ ಸಿಜೆಐ ಬುಲಾವ್ ನೀಡಿದ್ದಾರೆ. ಹಿರಿಯ ವಕೀಲರಾಗಿರುವ ಫಾಲಿ ಎಸ್ ನಾರಿಮನ್ ಹಾಗೂ ಶಾಂತಿ ಭೂಷಣ್ ಅವರುಗಳು ಚೆನ್ನೈನಿಂದ ಮಾಡಲಾಗಿರುವ ದೂರುಗಳ ಆಧಾರದಲ್ಲಿ ದಿನಕರನ್ ಅವರು ತಮ್ಮ ಆದಾಯಕ್ಕಿಂತ ಅತ್ಯಂತ ಹೆಚ್ಚಿನ ಪ್ರಮಾಣದ ಆಸ್ತಿಹೊಂದಿದ್ದಾರೆ ಎಂದು ಆಪಾದಿಸಿದ್ದಾರೆ. ಭೂಷಣ್ ಹಾಗೂ ಇತರ ಪ್ರತಿನಿಧಿಗಳು ಈ ಆಪಾದನೆಗಳ ಕುರಿತು ಕಾನೂನು ಸಚಿವ ವೀರಪ್ಪ ಮೊಯ್ಲಿಯವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಾತಿಗಾಗಿ ಇತರ ಐವರೊಂದಿಗೆ ದಿನಕರನ್ ಅವರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ.
ಹಿರಿಯ ನ್ಯಾಯವಾದಿಗಳು, ಮದ್ರಾಸ್ ಹೈಕೋರ್ಟ್ ನ್ಯಾಯಾವಾದಿಗಳ ಬೆಂಬಲದೊಂದಿಗೆ ದಿನಕರನ್ ವಿರುದ್ಧದ ಆರೋಪಗಳ ವಿಸ್ತೃತಪಟ್ಟಿಯನ್ನು ಮಾಡಲಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ದಿನಕರನ್ ಅವರಿಗೆ ಸುಪ್ರೀಂಕೋರ್ಟಿಗೆ ಭಡ್ತಿ ನೀಡಬಾರದು ಎಂಬುದಾಗಿ ಭೂಷಣ್ ಒತ್ತಾಯಸಿದ್ದಾರೆ.
ದಿನಕರನ್ ಸುಮಾರು 450 ಎಕರೆ ಜಾಗವನ್ನು ತನ್ನ ಹಾಗೂ ಪತ್ನಿ ಪುತ್ರಿಯರ ಹೆಸರಿನಲ್ಲಿ ಹೊಂದಿದ್ದಾರೆ ಎಂದು ದೂರಲಾಗಿದೆ. ಇದಲ್ಲದೆ ಅವರು ಜಾಮೀನು ಅದಾಲತ್ ನಡೆಸಿ ಒಂದೇ ಗಂಟೆಯೊಳಗೆ ಸುಮಾರು 500 ಜನರನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕೆಲವು ಕುಖ್ಯಾತ ಅಪರಾಧಿಗಳೂ ಸೇರಿದ್ದರು ಎಂಬದಾಗಿ ದೂರಲಾಗಿದೆ.
ಇದಲ್ಲದೆ, ಬಿನ್ನಿ ಕಾಟನ್ ಮಿಲ್ಸ್ ಪ್ರಕರಣದಲ್ಲೂ ಅವ್ಯವಹಾರ ನಡೆದಿದೆ ಎಂದು ದೂರಲಾಗಿದೆ. ಸರ್ಕಾರಿ ವಕೀಲರ ವಾದಮಂಡನೆಯ ಆಧಾರದಲ್ಲಿ ಕಂಪೆನಿಯೊಂದಕ್ಕೆ 50 ಕೋಟಿ ರೂಪಾಯಿಗಳ ರಿಯಾಯಿತಿ ನೀಡಲಾಗಿರುವುದಾಗಿ ಹೇಳಲಾಗಿತ್ತು. ಆದರೆ ಬಳಿಕ ವಕೀಲರು ತಾನು ವಾದ ಮಂಡಿಸಿರುವುದನ್ನು ನಿರಾಕರಿಸಿದ್ದಾರೆ.