ಕೊಲೆಯಾಗಿರುವ ಶಾಲಾಬಾಲಕಿ ಅರುಷಿ ತಲ್ವಾರ್ ಮೊಬೈಲ್ ಪತ್ತೆಯಾಗಿರುವ ಸಂಬಂಧ ವಿಚಾರಣೆಗಾಗಿ ವಶಪಡಿಸಿಕೊಂಡಿದ್ದ ಇಬ್ಬರನ್ನು ಸಿಬಿಐ ಬಿಡುಗಡೆ ಮಾಡಿದೆ. ರಾಮ್‌ಬೂಲ್ ಹಾಗೂ ಆತನ ಸಹೋದರಿ ಕುಸುಮ್ ಎಂಬಿಬ್ಬರನ್ನು ಇ ಸಂಬಂಧ ವಶಕ್ಕೆ ಪಡೆದುಕೊಂಡಿದ್ದ ಸಿಬಿಐ ಅವರ ವಿಚಾರಣೆ ನಡೆಸಿತ್ತು.
ಪೋನ್ ನೋಯ್ಡಾದಿಂದ ಬುಲಂದ್ ಶಹರ್‌ಗೆ ಹೇಗೆ ತಲುಪಿತು ಎಂಬುದನ್ನು ಪತ್ತೆ ಹಚ್ಚಲು ಇವರನ್ನು ವಿಚಾರಣೆಗೊಳಪಡಿಸಲಾಗಿದೆ. ದೆಹಲಿ ಪೊಲೀಸರು ಶನಿವಾರ ಮೊಬೈಲನ್ನು ವಶಪಡಿಸಿಕೊಂಡಿದ್ದರು.
ಇದು ನಿಜವಾಗಿಯೂ ಆಕೆ ಬಳಸುತ್ತಿದ್ದ ಫೋನಾಗಿತ್ತಾ ಮತ್ತು ಇತರ ಯಾವುದೇ ಮಾಹಿತಿಯನ್ನು ಪತ್ತೆ ಮಾಡಬಹುದೇ ಎಂಬ ಹಿನ್ನೆಲೆಯಲ್ಲಿ ಪತ್ತೆಯಾಗಿರುವ ನೋಕಿಯಾ ಎನ್-72 ಫೋನನ್ನು ಸಿಬಿಐ ಫಾರೆನ್ಸಿಕ್ ತಪಾಸಣೆಗಾಗಿ ಕಳುಹಿಸಿದೆ.
ಈ ಕೊಲೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವವರು ಹೇಳಿದ್ದಾರೆ. ಈ ಪೋನ್ ಸೆಕ್ಟರ್ 37ರ ಪಾರ್ಕಿನಲ್ಲಿ ಬಿದ್ದು ಸಿಕ್ಕಿದ್ದು, ಇದನ್ನು ಎರಡು ತಿಂಗಳ ಬಳಿಕ ತಾನು ತನ್ನ ಸಹೋದರ ರಾಮ್‌ಭೂಲ್‌ಗೆ ನೀಡಿರುವುದಾಗಿ ಕುಸುಮ್ ಹೇಳಿದ್ದಾಳೆ. ಈ ಪೋನನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಆಕ್ಟಿವೇಟ್ ಮಾಡಲಾಗಿತ್ತು.
ಫೋನ್ ತಮಗೆ ಸಿಕ್ಕಿದಾಗ ಪೋನಿನಲ್ಲಿ ಸಿಮ್ ಇರಲಿಲ್ಲ ಎಂಬುದಾಗಿ ಕುಸುಮ್ ಹಾಗೂ ರಾಮ್‌ಬೂಲ್ ಇಬ್ಬರೂ ಸಹ ಒಂದೇ ರೀತಿಯ ಹೇಳಿಕೆ ನೀಡಿದ್ದಾರೆ. ಇವರಿಬ್ಬರ ಹೇಳಿಕೆಯೂ ಒಂದೇ ರೀತಿ ಇರುವ ಕಾರಣ ಇವರಿಗೂ ಕೊಲೆಗೂ ಸಂಪರ್ಕ ಕಲ್ಪಿಸುವುದು ಕಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.