ಬೌದ್ಧ ಗುರು ದಲೈಲಾಮ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿನೀಡುವ ಕುರಿತು ಚೀನ ಎತ್ತಿರುವ ಆಕ್ಷೇಪವನ್ನು ತಳ್ಳಿಹಾಕಿರುವ ಭಾರತ, ಟಿಬೇಟಿನ ನಾಯಕ ಭಾರತದಲ್ಲಿ ಎಲ್ಲಿಗೇ ಆಗಲಿ, ಅಲ್ಲಿಗೆ ಹೋಗಲು ಮುಕ್ತರಾಗಿದ್ದಾರೆ" ಎಂದು ಹೇಳಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, "ಅರುಣಾಚಲ ಪ್ರದೇಶವು ಭಾರತದ ಭಾಗವಾಗಿದ್ದು, ದಲೈಲಾಮ ಅವರು ಭಾರತದ ಯಾವುದೇ ಭಾಗಗಳಿಗೆ ತೆರಳಲೂ ಮುಕ್ತವಾಗಿದ್ದಾರೆ" ಎಂದು ಹೇಳಿದ್ದು, ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯ ಸೂಚಿಸಬಾರದು ಅಷ್ಟೆ ಎಂದಿದ್ದಾರೆ.
ದಲೈಲಾಮ ಅವರು ಅರುಣಾಚಲ ಪ್ರದೇಶದ ತವಂಗ್ ಪ್ರದೇಶಕ್ಕೆ ಈ ವರ್ಷದ ಅಂತ್ಯದಲ್ಲಿ ಭೇಟಿ ನೀಡಲು ಭಾರತ ಸರ್ಕಾರದ ಅನುಮತಿ ಪಡೆದಿದ್ದಾರೆ. ಈ ಪ್ರದೇಶವನ್ನು ಚೀನ ತನ್ನದು ಎನ್ನುತ್ತಿದೆ.
ತವಂಗ್‌ನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯೊಂದರ ಉದ್ಘಾಟನೆಗಾಗಿ ದಲೈಲಾಮ ಅವರು ನವೆಂಬರ್ ತಿಂಗಳಲ್ಲಿ ಅರುಣಾಚಲಕ್ಕೆ ಆಗಮಿಸುತ್ತಿದ್ದಾರೆ. ಈ ಆಸ್ಪತ್ರೆ ನಿರ್ಮಾಣಕ್ಕಾಗಿ ಅವರು 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.