ಮುಜಾಫರ್ನಗರ, ಬುಧವಾರ, 16 ಸೆಪ್ಟೆಂಬರ್ 2009( 19:29 IST )
ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ನವವಿವಾಹಿತೆಯೊಬ್ಬಾಕೆಯನ್ನು ಆಕೆಯ ಪತಿ ಮನೆಯವರು ನೇಣು ಹಾಕಿ ಕೊಂದಿರುವ ಘಟನೆ ಇಲ್ಲಿನ ತಿಸ್ಸಾ ಎಂಬ ಹಳ್ಳಿಯಲ್ಲಿ ಸಂಭವಿಸಿದೆ ಎಂಬುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ರಾಜೇಂದ್ರ್ ಸೇನಿ ಎಂಬಾತನನ್ನು ಪೂನಂ ಎಂಬಾಕೆ ವಿವಾಹವಾಗಿದ್ದು, ಆಕೆ ಕಳೆದ ರಾತ್ರಿ ತನ್ನ ಮನೆಗೆ ದೂರವಾಣಿ ಕರೆ ನೀಡಿ, ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ತನಗೆ ಹಿಂಸೆ ನೀಡುತ್ತಾರೆ ಎಂದು ಹೇಳಿದ್ದಳು. ಅಲ್ಲದೆ, ತನ್ನನ್ನು ತಾನು ರಕ್ಷಿಸಿಕೊಳ್ಳವ ಸಲುವಾಗಿ ತಾನೇ ಕೊಠಡಿಯೊಳಗೆ ಬೀಗಹಾಕಿಕೊಂಡಿದ್ದೇನೆ ಎಂಬುದಾಗಿ ತನ್ನ ಹೆತ್ತವರಿಗೆ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಕೇಳಿದ ಹೆತ್ತವರು ತಕ್ಷಣವೇ ಪೂನಂ ರಕ್ಷಣೆ ಧಾವಿಸಿದ್ದಾರಾದರೂ, ಇವರು ಅಲ್ಲಿ ತಲುಪಿದಾಗ ಕಂಡದ್ದು ಹಗ್ಗದಲ್ಲಿ ನೇತಾಡುತ್ತಿದ್ದ ಪೂನಂ ಶವ. ಬಾಗಿಲಿನ ಬೀಗ ಒಡೆದಿತ್ತು.
ಪೂನಂಳ ಪತಿಯ ಮನೆಯವರು ಬೀಗ ಒಡೆದು ಕೊಠಡಿಯಲ್ಲಿದ್ದ ಪೂನಂಳನ್ನು ನೇಣುಹಾಕಿ ಕೊಂದಿರಬಹುದು ಎಂದು ಶಂಕಿಸಿದ್ದಾರೆ. ಆಕೆಯ ಪತಿಯ ಮನೆಯವರು ಈಗ ತಲೆತಪ್ಪಿಸಿಕೊಂಡಿದ್ದಾರೆ.
ಪೂನಂಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.