ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಪ್ರಯಾಣಕ್ಕೆ 230 ಕೋಟಿ; ರಾಹುಲ್ ತ.ನಾ ಪ್ರವಾಸಕ್ಕೆ ಕೋಟಿ ವ್ಯಯ (Austerity | Prime Minister | Air India | Rahul Gandhi)
 
PTI
ರಾಷ್ಟ್ರದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಿತವ್ಯಯದ ಚಳುವಳಿ ಆರಂಭಿಸಿ ಸಚಿವರು, ಸಂಸದರೆಲ್ಲ ಐಷಾರಾಮಿ ದರ್ಜೆ ತೊರೆದು ಸಾಮಾನ್ಯ ದರ್ಜೆಯ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದಾರೆ. ಈ ಹೊತ್ತಿನಲ್ಲಿ ಕಳೆದ ಅಧಿಕಾರಾವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿದೇಶಿ ಪ್ರಯಾಣಕ್ಕೆ ತಗುಲಿರುವ ವೆಚ್ಚವೆಷ್ಟು ಎಂಬುದಾಗಿ ನೋಟ ಹರಿಸಿದರೆ, ಕಂಡು ಬರುವ ಅಂಶ ಈ ವೆಚ್ಚ 233.8 ಕೋಟಿ ರೂಪಾಯಿಗಳು.

ಮನಮೋಹನ್ ಸಿಂಗ್ ಅವರಿಗಿಂತ ಹಿಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ವಿದೇಶಿ ಪ್ರವಾಸದ ಮೊತ್ತ 185.60 ಕೋಟಿ ರೂಪಾಯಿ.

ಪ್ರಧಾನಿಯವರು 2005ರಲ್ಲಿ ಕೈಗೊಂಡಿದ್ದ ಫ್ರಾನ್ಸ್, ಅಮೆರಿಕ ಮತ್ತು ಜರ್ಮನಿ ಪ್ರವಾಸದ ಖರ್ಚು 13.4 ಕೋಟಿ. ಬ್ರಿಟನ್ ಮತ್ತು ಅಮೆರಿಕ ಭೇಟಿಯ ಬಿಲ್ 11.9ಕೋಟಿ. ಏರ್ ಇಂಡಿಯಾ ವಿಮಾನಗಳಿಗೆ ನೀಡಿರುವ ಬಾಡಿಗೆಯನ್ವಯ ವೆಚ್ಚವನ್ನು ಲೆಕ್ಕಹಾಕಲಾಗಿದೆ ಎಂಬುದಾಗಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಕೆಲತಿಂಗಳ ಹಿಂದೆ ಸರ್ಕಾರದಿಂದ ಮಾಹಿತಿ ಕೋರಿದ್ದ ಚೇತನ್ ಕೊಠಾರಿ ಹೇಳಿದ್ದರು.

ಇಂತಹ ಭೇಟಿಗಳ ವೇಳೆಗೆ ಪ್ರಧಾನಿ ಕುಟುಂಬವೂ ಅವರೊಂದಿಗೆ ತೆರಳಿತ್ತು ಎಂದು ಪ್ರಧಾನಿ ಕಚೇರಿ ಹೇಳಿದೆ. 5.3ಕೋಟಿ ರೂಪಾಯಿ ಮೊತ್ತವನ್ನು ಪ್ರಧಾನಿಯವರೊಂದಿಗೆ ಸಂಪರ್ಕದಿಂದ ಇರಲು ಹಾಟ್‌ಲೈನ್ ಮತ್ತು ಸಂಪರ್ಕ ಸೌಲಭ್ಯಗಳಿಗಾಗಿ ವಿನಿಯೋಗಿಸಲಾಗಿದೆ. 1.21 ಕೋಟಿ ರೂಪಾಯಿ ಪ್ರಧಾನಿಯವರೊಂದಿಗೆ ತೆರಳುವ ಅಧಿಕಾರಿಗಳ ತುಟ್ಟಿಭತ್ಯೆ ಹಾಗೂ ಹೋಟೇಲು ವೆಚ್ಚಗಳಿಗೆ ಭರಿಸಲಾಗಿದೆ. ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸಾರ್ಕ್ ಶೃಂಗದಲ್ಲಿ ಭಾಗವಹಿಸಿದ್ದ ವೇಳೆ ಆಗಿರುವ ವೆಚ್ಚ3.70 ಕೋಟಿ ರೂಪಾಯಿ. ಕಳೆದ ಜನವರಿಯ ಮೂರು ದಿನಗಳ ಚೀನಾ ಭೇಟಿಯ ವೆಚ್ಚ 6.80 ಕೋಟಿ ರೂಪಾಯಿ.

ಪ್ರಧಾನಿ ಅವರು ಮುಂದಿನ ಎರಡು ತಿಂಗಳಲ್ಲಿ ಪೀಟರ್ಸ್‌ಬರ್ಗ್ ಹಾಗೂ ಟ್ರಿನಿಡಾಡ್‌ಗಳಿಗೆ ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ತೆರಳಲಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಖರ್ಚುವೆಚ್ಚಗಳಿಗೆ ಹೇಗೆ ಕಡಿವಾಣ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಹಲ್ ಗಾಂಧಿ ಮಿತವ್ಯಯ ಹೀಗಿದೆ
PTI
ಮೊನ್ನೆ ಲುಧಿಯಾನಕ್ಕೆ ಕಾಂಗ್ರೆಸ್ ಸಭೆಯೊಂದಕ್ಕೆ ತೆರಳುವ ವೇಳೆ ರೈಲಿನಲ್ಲಿ ಪ್ರಯಾಣ ಮಾಡಿ 445 ರೂಪಾಯಿ ಉಳಿಸಿರುವ ರಾಹುಲ್ ಗಾಂಧಿ ಇತ್ತೀಚೆಗೆ ತಮಿಳ್ನಾಡಿಗೆ ಮೂರು ದಿನಗಳ ಭೇಟಿ ನೀಡಿದಾಗ ಆಗಿರುವ ಖರ್ಚು ಕೋಟಿ ರೂಪಾಯಿ ದಾಟಿದೆ.

ರಾಹುಲ್ ಗಾಂಧಿ ತನ್ನ ಪ್ರಯಾಣಕ್ಕೆ ಹೆಚ್ಚಾಗಿ ಗಂಟೆಗೆ 1.5ಲಕ್ಷ ಬಾಡಿಗೆಯ ಹೆಲಿಕಾಫ್ಟರ್ ಹಾಗೂ ಗಂಟೆಗೆ 1.1ಲಕ್ಷ ಬಾಡಿಗೆ ವಿಧಿಸುವ ಬೀಚ್‌ಕ್ರಾಫ್ಟನ್ನು ಹೆಚ್ಚಾಗಿ ಬಳಸಿದ್ದಾರೆ. ಇದರಿಂದಾಗಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್‌ ಹೆಲಿಕಾಫ್ಟರ್‌ ಬಾಡಿಗೆಗಾಗಿ ಒಂದು ಕೋಟಿಗೂ ಅಧಿಕ ವ್ಯಯಿಸಿದೆ.

ನವದೆಹಲಿ ಮೂಲದ ಏರ್ ಚಾರ್ಟರ್ ಪ್ರೈವೇಟ್ ಲಿಮಿಟೆಡ್ ಕಾರ್ಯಾಚರಿಸುತ್ತಿರುವ 2006 ಬೀಚ್‌ಕ್ರಾಫ್ಟ್ ಕಿಂಗ್ ಏರ್ 350 ಏರ್‌ಕ್ರಾಫ್ಟ್ ಶೇ.10ರಷ್ಟು ಸೇವಾ ತೆರಿಗೆಯನ್ನೂ ವಿಧಿಸುತ್ತದೆ. ಇದರೊಂದಿಗೆ ರಾಹುಲ್ ಗಾಂಧಿಯೊಂದಿಗೆ ತೆರಳುವ ಎಸ್‌ಪಿಜಿ ಭದ್ರತಾ ಪಡೆಯೂ ಸೇನೆಯ ಪವನ್ ಹಾನ್ ಹೆಲಿಕಾಫ್ಟರ್‌ನಲ್ಲಿ ತೆರಳಿತ್ತು.

ಬೀಚ್‌ಕ್ರಾಫ್ಟ್‌ನಲ್ಲಿ ತಿರುವನಂತಪುರಂಗೆ ಬಂದಿಳಿದ ರಾಹುಲ್ ಅಲ್ಲಿದ್ದ ಪವನ್ ಹಾನ್ ಹೆಲಿಕಾಫ್ಟರ್‌ನಲ್ಲಿ ತೆರಳಿದರು. ಕೊಯಂಬುತ್ತೂರಿನಿಂದ ದೆಹಲಿಗೆ ಮರಳುವ ವೇಳೆಗೆ ಅವರು ಎಂಟು ಸೀಟರ್ ಫಲ್ಕೊನ್ 2000 ಏರ್‌ಕ್ರಾಫ್ಟ್‌ನಲ್ಲಿ ಪ್ರಯಾಣಿಸಿದರು. ಇದು ಮುಂಬೈ ಮೂಲದ ತಾಜ್ ಏರ್ ಒಡೆತನದ್ದು. ದೆಹಲಿ ಕೊಯಂಬುತ್ತೂರಿನ ವನ್ ವೇ ಟ್ರಿಪ್ಪಿಗೆ 20,31,250 ರೂಪಾಯಿ ತಗುಲುತ್ತದೆ ಎಂಬುದಾಗಿ ತಾಜ್ ವೆಬ್ ಸೈಟ್ ಹೇಳುತ್ತದೆ.

ರಾಹುಲ್ ಪ್ರಯಾಣದ ವಿವರ ಇಂತಿದೆ. ಮೊದಲ ದಿನ ತಿರುವನಂತಪುರ-ನಾಗರ ಕೋವಿಲ್-ತಿರುನೆಲ್ವೇಲಿ-ವಿರುದ್ಧನಗರ್-ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ. ಅಂದು ಮಧುರೈ ಸರ್ಕ್ಯೂಟ್‌ಹೌಸಿನಲ್ಲಿ ತಂಗಿದ್ದರು. ಮರುದಿನ ತಾಂಜಾವೂರ್-ಪುದುಚೇರಿ-ವಿಲ್ಲುಪುರಂ-ವೆಲ್ಲೂರು-ಅರಕ್ಕೋಣಂ-ಚೆನ್ನೈ ಪ್ರಯಾಣ ಮಾಡಿದ್ದರೆ, ಮೂರನೇ ದಿನದಂದು ಚೆನ್ನೈ-ಹೊಸೂರು-ಸೇಲಂ-ಕೊಯಂಬುತ್ತೂರು ಪ್ರವಾಸ ಮಾಡಿದ್ದರು. ಇಲ್ಲೆಲ್ಲ ಪ್ರಯಾಣಿಸುವ ವೇಳೆಗೆ ಅನುಕೂಲವೆಸುವಂತೆ ಹೆಲಿಕಾಫ್ಟರ್, ಬೀಚ್‌ಕ್ರಾಫ್ಟ್ ಬಳಸಿದ್ದಾರೆ. ಅಲ್ಲದೆ ಇವರ ಹೆಲಿಕಾಫ್ಟರ್ ಇಳಿದ ಹಾಗೂ ನಿಲ್ಲಿಸಿದ ಕೆಲವು ಕಡೆಗಳಲ್ಲಿ ಅಪಾರ ಮೊತ್ತದ ನೆಲಬಾಡಿಗೆಯನ್ನೂ ನೀಡಲಾಗಿದೆ.
ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ