ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್: ಅಭಿಮಾನಿಗಳ 'ಆಘಾತ'ದ ಸಾವು ಪೊಳ್ಳು? (YSR Death | Suicide | Natural Death | Congress | Andhra Pradesh | Jaganmohan Reddy)
 
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತ ಸಾವಿಗೀಡಾದ ಬಳಿಕ ಆಂಧ್ರದಲ್ಲಿ ಸಮೂಹ ಸನ್ನಿಯೋ ಎಂಬಂತೆ ನೂರಾರು ಮಂದಿ ಹೃದಯಾಘಾತದಿಂದ ಸತ್ತರು ಎಂಬ ಸುದ್ದಿ ಕೇಳಿದ್ದೇವೆ. ಇದರ ಹಿಂದಿನ ಹುನ್ನಾರ ಇದೀಗ ಬಯಲಾಗಿದೆ.

ಈ ರೀತಿ ವೈಎಸ್ಆರ್ 'ಅಭಿಮಾನ'ದಿಂದ ಸಾವಿಗೀಡಾದ ಪ್ರಕರಣಗಳಲ್ಲಿ ಕೆಲವನ್ನು ಪರಿಶೀಲಿಸಿದಾಗ, ಸಹಜ ಸಾವುಗಳನ್ನು ಕೂಡ 'ವೈಎಸ್ಆರ್ ಸಾವಿನ ಆಘಾತದಿಂದ' ಆದ ಸಾವು ಎಂಬಂತೆ ಬಿಂಬಿಸಲಾಗಿರುವ ಬಗ್ಗೆ 'ಮೇಲ್ ಟುಡೇ' ವರದಿ ಮಾಡಿದೆ.

ವೈಎಸ್ಆರ್ ಪುತ್ರ ವೈ.ಎಸ್.ಜಗನ್ಮೋಹನ್ ರೆಡ್ಡಿಯನ್ನೇ ಮುಖ್ಯಮಂತ್ರಿ ಪದವಿ ಮೇಲೆ ಕುಳ್ಳಿರಿಸುವ ನಿಟ್ಟಿನಲ್ಲಿ ಲಾಬಿ ಮಾಡತೊಡಗಿದ ಸ್ಥಳೀಯ ಕಾಂಗ್ರೆಸಿಗರು ಈ ರೀತಿಯ ಸಹಜ ಸಾವುಗಳನ್ನು ವೈಎಸ್ಆರ್ ಸಾವಿಗೆ ತಳುಕು ಹಾಕುವ ಪ್ರಯತ್ನಗಳು ನಡೆದಿದ್ದವು ಎಂದು ಈ ಮಾಧ್ಯಮವು ಕೈಗೊಂಡ ತನಿಖೆಯಿಂದ ಸಾಬೀತಾಗಿದೆ.

ಈ ತನಿಖೆಯ ಪ್ರಕಾರ, ಟೀವಿಯೇ ಇಲ್ಲದವರ ಮನೆಯಲ್ಲಿ ಸಾವು ಸಂಭವಿಸಿತ್ತು. ಅದನ್ನು ಕೂಡ ಟಿವಿಯಲ್ಲಿ ಸುದ್ದಿ ಕೇಳಿ ಹೃದಯಾಘಾತದಿಂದ ಸಾವು ಎಂದು ಬಿಂಬಿಸಲಾಗಿತ್ತು. ಅದೇ ರೀತಿ ರೋಗ ರುಜಿನದಿಂದ ಬಳಲುತ್ತಿದ್ದವರ ಸಾವು, ವಯೋವೃದ್ಧರ ಸಹಜ ಸಾವು ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೆಲ್ಲವನ್ನೂ ವೈಎಸ್ಆರ್ ಮೇಲಿನ ಅಭಿಮಾನದಿಂದ ಸಾವು, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಮತ್ತು ಈ ಕುರಿತು ನಿಜ ಬಾಯಿ ಬಿಡದಂತೆ ಸಂಬಂಧಿತ ಕುಟುಂಬಗಳಿಗೆ 5 ಸಾವಿರ ರೂ.ವರೆಗೆ ಭರವಸೆ ನೀಡಲಾಗಿತ್ತು ಎಂಬ ಅಂಶವನ್ನೂ ಈ ಚಾನೆಲ್ ಹೊರಗೆಡಹಿದೆ.

ಇದರ ಹಿಂದೆ ಸ್ಥಳೀಯ ಕಾಂಗ್ರೆಸಿಗರ ಕೈ ಇರುವುದು ದೃಢಪಟ್ಟಿದೆ. ವೈಎಸ್ಆರ್ ಅವರ ಮಹತ್ವಾಕಾಂಕ್ಷಿ ಪುತ್ರ ಜಗನ್ಮೋಹನ್ ಅವರನ್ನು ಮುಖ್ಯಮಂತ್ರಿ ಪೀಠದಲ್ಲಿ ಕುಳ್ಳಿರಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ಒತ್ತಡ ತರುವುದಕ್ಕಾಗಿ ಈ ರೀತಿ ಮಾಡಲಾಗಿದೆ. ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷವು ಕೂಡ ಕಾಲ ಕಾಲಕ್ಕೆ 'ಬುಲೆಟಿನ್'ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಇಂತಿಷ್ಟು ಜನರು ವೈಎಸ್ಆರ್ ಸಾವಿನ ಆಘಾತ ತಾಳಲಾರದೆ ಆಘಾತಗೊಂಡು ಮರಣವನ್ನಪ್ಪಿದ್ದಾರೆ ಎಂದು ತಿಳಿಸುತ್ತಿತ್ತು. ಸಿಎಲ್‌ಪಿ ಬಿಡುಗಡೆ ಮಾಡಿದ ಪಟ್ಟಿ ಪ್ರಕಾರ, ಸೆ.3ರಂದು ವೈಎಸ್ಆರ್ ಸಾವಿನ ಸುದ್ದಿ ಟಿವಿಗಳಲ್ಲಿ ಬಿತ್ತರಗೊಂಡ ಬಳಿಕ ಒಟ್ಟು 462 ಮಂದಿ 'ಆಘಾತ ತಾಳಲಾರದೆ' ಸತ್ತಿದ್ದು, ಅವರಲ್ಲಿ 402 ಮಂದಿಗೆ ಹೃದಯಾಘಾತವಾಗಿದ್ದರೆ, 60 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರಂತೆ.

ಈ ಬಗ್ಗೆ ವಿರೋಧ ಪಕ್ಷ ತೆಲುಗು ದೇಶಂನ ಶಾಸಕ ರೇವುರಿ ಪ್ರಕಾಶ್ ರೆಡ್ಡಿ ಪ್ರತಿಕ್ರಿಯೆ ನೀಡಿ, 'ವೈಎಸ್ಆರ್ ತವರೂರಾಗಿರುವ ಪುಲಿವೆಂದುಲದಲ್ಲಿ ಒಬ್ಬನೇ ಒಬ್ಬ 'ಆಘಾತಗೊಂಡು' ಸತ್ತಿಲ್ಲದಿರುವುದು ಆಶ್ಚರ್ಯಕರ. ನನ್ನ ನರಸಂಪೇಟೆ ಕ್ಷೇತ್ರದಲ್ಲಿ ನಾಲ್ವರು ಸತ್ತಿದ್ದಾರೆ. ಇವರೆಲ್ಲರೂ ಸಹಜ ಸಾವಿನಿಂದ ಮರಣ ಹೊಂದಿದವರು. ಇದು ಕಾಂಗ್ರೆಸ್ ಪ್ರಣೀತ ಸಮೂಹ ಸನ್ನಿ. ಕಾಂಗ್ರೆಸ್ ರಾಜಕೀಯ ಈ ರೀತಿಯ ಮಟ್ಟಕ್ಕಿಳಿದಿರುವುದು ತೀರಾ ದುರದೃಷ್ಟಕರ' ಎಂದಿದ್ದಾರೆ.

ಚಾನೆಲ್ ನಡೆಸಿರುವ ತನಿಖೆಯ ಪ್ರಕಾರ, ಕೆಲವು ಕುಟುಂಬಗಳು ತಮಗೆ ಕಾಂಗ್ರೆಸ್ ಮುಖಂಡರು ಬಾಯಿ ಮುಚ್ಚಿ ಕೂತರೆ, ಜಗನ್ಮೋಹನ್ ಅವರು ಮುಖ್ಯಮಂತ್ರಿಯಾದ ಬಳಿಕ 5000 ರೂ. ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಸೆ.3ರಂದು ಪರಕಾಲ ಮಂಡಲದ ಲಕ್ಷ್ಮೀಪುರ ಎಂಬಲ್ಲಿ 70ರ ಹರೆಯದ ಉಪ್ಪಾಳಯ್ಯ ಎಂಬ ವೃದ್ಧರು ಸಾವಿಗೀಡಾಗಿದ್ದರು. ಜಗನ್ಮೋಹನ್ ಒಡೆತನದ ಸಾಕ್ಷಿ ಟಿವಿ (ತೆಲುಗು) ಇದನ್ನು ತನ್ನ ಸ್ಕ್ರಾಲ್‌ನಲ್ಲಿ ಬಿತ್ತರಿಸಿ, ವೈಎಸ್ಆರ್ ಸಾವಿನ ಶೋಕ ತಾಳದೆ, ಉಪ್ಪಾಳಯ್ಯ ಅವರು ಟೀವಿಯಲ್ಲಿ ಈ ಸುದ್ದಿ ಕೇಳಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿತ್ತರಿಸಿತು. ಉಳಿದ ಚಾನೆಲ್‌ಗಳೂ ಅನುಸರಿಸಿದವು. ವಾಸ್ತವವಾಗಿ ಉಪ್ಪಾಳಯ್ಯ ಮನೆಯಲ್ಲಿ ಟೀವಿಯೇ ಇರಲಿಲ್ಲ! ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಪ್ಪಾಳಯ್ಯ ಸಾವಿನ ಹಿಂದೆ ಕಟು ಸತ್ಯವೊಂದು ಇದ್ದಿರುವುದು ಮುಚ್ಚಿ ಹೋಗಿತ್ತು. ಇಂತಹ ಹಲವು ಪ್ರಕರಣಗಳನ್ನು ಮೇಲ್ ಟುಡೇ ಬಯಲುಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ