ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಲಿಂಗ ರತಿ: ಕೇಂದ್ರ ಸರ್ಕಾರದ ವಿರೋಧವಿಲ್ಲ (Government | HC order | Homosexuality | Supreme Court)
 
ವಿವಾದಾಸ್ಪದ ಸಲಿಂಗರತಿ ಕುರಿತು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತಂತೆ ಯಾವುದೇ ನಿರ್ದಿಷ್ಟ ನಿಲುವು ತಳೆಯದಿರುವ ಕೇಂದ್ರ ಸರ್ಕಾರವು ಈ ಕುರಿತು ನಿರ್ಧಾರ ಕೈಗೊಳ್ಳುವ ವಿಚಾರವನ್ನು ಸುಪ್ರೀಂ ಕೋರ್ಟಿಗೆ ಬಿಟ್ಟಿದೆ.

ಹೈಕೋರ್ಟ್ ತೀರ್ಪನ್ನು ವಿರೋಧಿಸುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಗುರುವಾರ ಔಪಚಾರಿಕವಾಗಿ ಘೋಷಿಸುವ ಮೂಲಕ ಚೆಂಡನ್ನು ಸುಪ್ರೀಂ ಕೋರ್ಟ್ ಅಂಗಳಕ್ಕೆ ಕಳುಹಿಸಿ ಕೈತೊಳೆದುಕೊಂಡಿದೆ. ತ್ರಿಸದಸ್ಯ ಸಚಿವರ ಸಮೂಹವು ನೀಡಿರುವ ವರದಿಯನ್ನು ಸಂಪುಟವು ಪರಿಗಣಿಸಿದ್ದು, ಹೈ ಕೋರ್ಟಿನ ತೀರ್ಪನ್ನು ವಿರೋಧಿಸದಿರಲು ನಿರ್ಧರಿಸಲಾಗಿದೆ ಎಂಬುದಾಗಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಸಚಿವರ ಸಮಿತಿ ವರದಿಯನ್ನು ಪರಿಗಣಿಸಿದ ಬಳಿಕ ಸರ್ಕಾರವು ನಿರ್ಧಾರ ಕೈಗೊಂಡಿದೆ. ಹೈಕೋರ್ಟು ನೀಡಿರುವ ತೀರ್ಪು ಸರಿಯೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟಿಗೆ ಅವಶ್ಯವಿರುವ ಎಲ್ಲಾ ಸಹಾಯವನ್ನು ಅಟಾರ್ನಿ ಜನರಲ್ ಅವರು ನೀಡಬೇಕು ಎಂಬುದಾಗಿ ಸಂಪುಟವು ನಿರ್ಧರಿಸಿದೆ ಎಂದು ಸೋನಿ ಹೇಳಿದ್ದಾರೆ.

ಸಲಿಂಗ ರತಿ ಹಕ್ಕನ್ನು ಬೆಂಬಲಿಸುವ ಕುರಿತು ಸಂಪುಟದ ಕೆಲವು ಸದಸ್ಯರಿಗೆ ಅಸಮಾಧಾನವಿದ್ದರೂ ಸಹ ಈ ವಿವಾದಾಸ್ಪದ ವಿಚಾರಕ್ಕೆ ತಕ್ಕಂತೆ ನಿಲುವೊಂದನ್ನು ಹೊಂದಲು ನಿರಾಕರಿಸಿದೆ. ಗೃಹಸಚಿವ ಪಿ.ಚಿದಂಬರಂ, ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಹಾಗೂ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಸಚಿವರ ತಂಡವನ್ನು ಈ ಕುರಿತು ನಿರ್ಧಾರ ಕೈಗೊಳ್ಳಲು ನೇಮಿಸಲಾಗಿದ್ದು ಈ ಸಮೂಹವು ದೆಹಲಿ ಹೈಕೋರ್ಟಿನ ತೀರ್ಪನ್ನು ವಿರೋಧಿಸದಿರಲು ನಿರ್ಧರಿಸಿದೆ. ಸಚಿವರ ಸಮಿತಿಯ ಸರಣಿ ಸಭೆಗಳನ್ನು ನಡೆಸಿ ಈ ನಿರ್ಧಾರಕ್ಕೆ ಬಂದಿದ್ದು, ತಮ್ಮ ವರದಿಯನ್ನು ಈಗಾಗಲೇ ಪ್ರಧಾನಿಯವರಿಗೆ ಸಲ್ಲಿಸಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿ ಅಕ್ಟೋಬರ್ ಒಂದರಂದು ವಿಚಾರಣೆಗೆ ಬರಲಿದೆ. ಕ್ರೈಸ್ತ ಮಂಡಳಿಯೊಂದು ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರುಗಳು ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಅರ್ಜಿಸಲ್ಲಿಸಿದ್ದಾರೆ. ಆಗಸ್ಟ್ 17ರಂದು ಈ ಕುರಿತು ಸರ್ಕಾರದ ಅಭಿಪ್ರಾಯವೇನು ಎಂಬುದಾಗಿ ತಿಳಿಸಲು ಸುಪ್ರೀಂ ಕೋರ್ಟ್ ಹೇಳಿತ್ತು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ