ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾರ್ಖಂಡ್: ಇವರು ಅನಾಥಾಲಯಕ್ಕಾಗಿ ಭಿಕ್ಷೆ ಎತ್ತುತ್ತಾರೆ (Jharkhand | Kantha Singh | orphanage | Tribal communities)
 
ಇವರ ಹೆಸರು ಕಾಂತಾ ಸಿಂಗ್. ಈ ಹಿಂದೆ ಮೋಟಾರ್ ಮೆಕಾನಿಕ್ ಆಗಿದ್ದವರು. ಇದೀಗ ಅನಾಥರ ಈ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಸುಮಾರು 42 ಅನಾಥ ಮಕ್ಕಳಿಗೆ ಆಶ್ರಯ ನೀಡಿರುವ ಕಾಂತಾ ಸಿಂಗ್ ಇದಕ್ಕಾಗಿ ಜಾರ್ಖಂಡ್‌ನ ದಂಪಾರ ಗ್ರಾಮದಲ್ಲಿ ತಿರುಪೆ ಎತ್ತುತ್ತಾರೆ.

2007ರಲ್ಲಿ ಆರಂಭವಾದ ಈ ಅನಾಥಶ್ರಮದಲ್ಲಿ ಮೊದಲಿಗೆ 15 ಮಕ್ಕಳಿದ್ದರು. ಈ ಪ್ರದೇಶದಲ್ಲಿ ತಾಂಡವವಾಡುತ್ತಿರುವ ಮದ್ಯಪಾನ ಚಟ ಹಾಗೂ ಬಹುಪತ್ನಿತ್ವದಿಂದಾಗಿ ಮಕ್ಕಳು ಅನಾಥರಾಗುತ್ತಿದ್ದು ಇಂತಹವರನ್ನು ಕಾಂತಾ ಸಿಂಗ್ ಸಾಕಿ ಸಲಹುವ ಹೊಣೆಯನ್ನು ಸ್ವಯಂ ಆಗಿ ಹೊತ್ತುಕೊಂಡಿದ್ದಾರೆ.

"ಅವರಿಗೆ ಯಾರೂ ಪೋಷಕರಿಲ್ಲ. ಇವರಲ್ಲಿ ಕೆಲವರು ಹೊಟ್ಟೆಪಾಡಿಗಾಗಿ ಕೆಲಸವನ್ನೂ ಮಾಡುತ್ತಿದ್ದರು. ಮತ್ತೆ ಕೆಲವರು ತಮ್ಮ ಸಂಬಂಧಿಗಳ ಜತೆಯಲ್ಲಿದ್ದರು. ನಾವು 15 ಅನಾಥ ಮಕ್ಕಳೊಂದಿಗೆ ಸ್ಥಾಪಿಸಿರುವ ಈ ಅನಾಥಾಲಯದಲ್ಲಿ ನಾವೀಗ 42 ಮಂದಿ ಇದ್ದೇವೆ. ಇವರೆಲ್ಲರ ಬಗ್ಗೆ ಸೂಕ್ತ ಕಾಳಜಿ ವಹಿಸಲಾಗುತ್ತದೆ ಮತ್ತು ಇವರೆಲ್ಲ ವಿದ್ಯಾಭ್ಯಾಸ ಮಾಡುತ್ತಿದ್ದಾರೆ" ಎಂದು ಸಿಂಗ್ ಹೇಳಿದ್ದಾರೆ.

ಈ ಅನಾಥಾಲಯದಲ್ಲಿ ಸ್ವಯಂಸೇವಕರಿದ್ದಾರೆ ಅವರು ಸುತ್ತಮುತ್ತಲ ಗ್ರಾಮಗಳಲ್ಲಿ ಭಿಕ್ಷೆ ಎತ್ತುತ್ತಾರೆ. ಜನರು ನೀಡುವುದು ಕೆಲವೊಮ್ಮೆ ಸಾಕಾಗುವುದಿಲ್ಲ. ಹಾಗಾಗಿ ಕೆಲವು ಸಮಯ ಮಕ್ಕಳು ಉಪ್ಪುಗಂಜಿ ಉಣ್ಣಬೇಕಾಗುತ್ತದೆ ಎಂಬುದಾಗಿ ಅವರ ತಮ್ಮ ಕಷ್ಟಹೇಳಿಕೊಳ್ಳುತ್ತಾರೆ.

ಇದೀಗ ಕಾಂತಾ ಸಿಂಗ್ ಅವರಿಗೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಆಹ್ವಾನ ಬಂದಿದೆ. ಇದರಿಂದಾಗಿ ತಮಗೆ ಮತ್ತು ತಮ್ಮ ಆಶ್ರಮಕ್ಕೆ ಒಳಿತಾಗಬಹುದು ಎಂಬುದು ಸಿಂಗ್ ಜತೆ ಕಾರ್ಯನಿರ್ವಹಿಸುತ್ತಿರುವ ರಾಮಚಂದ್ರ ಹೇಮಬ್ರಹ್ಮ ಎಂಬವರ ಅಭಿಪ್ರಾಯ. ರಾಷ್ಟ್ರಪತಿಗಳ ಈ ಅನೀರೀಕ್ಷಿತ ಆಹ್ವಾನ ಅವರೆಲ್ಲರನ್ನು ಅನಂದತುಂದಿಲರನ್ನಾಗಿಸಿದೆ.

ಈ ಅನಾಥಾಲಯದ ಒಳಗೆಯೇ ಶಾಲೆಯೊಂದನ್ನು ನಡೆಸುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ಕಾಳಜಿಯಯನ್ನೂ ವಹಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿಗಳು ಸಹಾಯ ನೀಡಬಹುದು ಎಂಬುದೀಗ ಇವರೆಲ್ಲರ ನಂಬುಗೆ.
ಸಂಬಂಧಿತ ಮಾಹಿತಿ ಹುಡುಕಿ