ನವದೆಹಲಿ, ಶುಕ್ರವಾರ, 18 ಸೆಪ್ಟೆಂಬರ್ 2009( 09:23 IST )
PTI
ತನ್ನ 'ಜಾನುವಾರು ದರ್ಜೆ' ಹೇಳಿಕೆಯಿಂದ ಉಂಟಾಗಿರುವ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವ ಶಶಿ ತರೂರ್ ಅವರು ಗುರುವಾರ ತಡರಾತ್ರಿ ಇದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿರುವ ಅವರು ಇದರಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಓದುಗರೊಬ್ಬರು "ಸಚಿವರೇ ನೀವು ಇನ್ನೊಮ್ಮೆ ಕೇರಳಕ್ಕೆ ಪ್ರಯಾಣಿಸುವ ವೇಳೆ ಜಾನವಾರು ದರ್ಜೆಯಲ್ಲಿ ಪ್ರಯಾಣಿಸುವಿರೇ" ಎಂಬುದಾಗಿ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅವರು "ನಮ್ಮೆಲ್ಲ 'ಪೂಜನೀಯ ದನ'ಗಳೊಂದಿಗೆ ಏಕತೆ ಪ್ರದರ್ಶಿಸಲು ನಾನು ಕೂಡ ದನಗಳ ದರ್ಜೆಯಲ್ಲಿ ಪ್ರಯಾಣಿಸುವೆ" ಎಂಬುದಾಗಿ ಉತ್ತರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ತರೂರ್ ಅವರ ಈ ವ್ಯಂಗ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಇದು ಸ್ವೀಕಾರಾರ್ಹವಾದ ಹೇಳಿಕೆಯಲ್ಲ ಎಂದು ಹೇಳಿತ್ತು. ಅಲ್ಲದೆ, ತರೂರ್ ಅವರು ಭಾರತೀಯ ರಾಜಕಾರಣಕ್ಕೆ ಹೊಸಬರಾಗಿರುವ ಕಾರಣ ಅವರಿಗೆ ಸ್ಥಳೀಯ ಭಾವನೆಗಳ ಪ್ರಜ್ಞೆ ಇಲ್ಲ ಎಂಬುದಾಗಿ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದರು.
ಪ್ರಸಕ್ತಿ ಲೈಬೀರಿಯಕ್ಕೆ ಅಧಿಕೃತ ಭೇಟಿಗಾಗಿ ತೆರಳಿರುವ ತರೂರ್, ತನ್ನ ಹೇಳಿಕೆಯಿಂದ ಉದ್ಭವಿಸಿರುವ ವಿವಾದದ ಕುರಿತು ತನಗೆ ತಡವಾಗಿ ತಿಳಿಯಿತು ಎಂಬುದಾಗಿ ಗುರುವಾರ ತಡರಾತ್ರಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಲ್ಲಿ ಜಾನುವಾರು ದರ್ಜೆ ಬಳಸಲಾಗಿದ್ದ ಕಾರಣ ನಾನು ಅದರಂತೆಯೇ ಉತ್ತರಿಸಿದ್ದೇನೆ. ಇದೊಂದು ಕ್ಷುಲ್ಲಕ ಅಭಿವ್ಯಕ್ತಿ ಎಂದಿರುವ ಅವರು, ಇದು ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ಅಗೌರವವಲ್ಲ ಎಂದಿದ್ದಾರೆ.
ತನ್ನ ಹೇಳಿಕೆಯನ್ನು ಮಲಯಾಳಂಗೆ ತರ್ಜಮೆಗೊಳಿಸಿದಾಗ ಅದು ಇನ್ನಷ್ಟು ಕೆಟ್ಟದಾಗಿ ಕೇಳಿರಬಹುದು, ಅದರಲ್ಲೂ ವಿಶೇಷವಾಗಿ ಅದನ್ನು ತಪ್ಪಾಗಿ ಅರ್ಥೈಸಿದರೆ ಮತ್ತಷ್ಟು ಕೆಟ್ಟದಾಗಿರುತ್ತದೆ ಎಂದಿರುವ ಅವರು "ಈ ಶಬ್ದದ ಪುನರಾವರ್ತನೆಯು ನಿಂದನೆಯೆಂಬ ಭಾವನೆಯಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದು ಹೇಳಿರುವ ತರೂರ್ ಈ ವಿವಾದಕ್ಕೆ ತರೆ ಎಳೆಯಲು ಮುಂದಾಗಿದ್ದಾರೆ. ಅಲ್ಲದೆ ತಾನು ಪವಿತ್ರ ದನಗಳು ಎಂದಿರುವುದು ಯಾವದೇ ವ್ಯಕ್ತಿಗಳನ್ನು ಉಲ್ಲೇಖಿಸಿ ಅಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.