ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗಳ ಮಾಡಿ ಯೋಜನಾಗಾತ್ರ ಹೆಚ್ಚಿಸಿಕೊಂಡ ಮೋದಿ (Gujarat | Narendra Modi | Planning Commission | Gir | Lion | Tiger)
 
Narendra Modi
PTI
ಗುಜರಾತ್ ಅಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದರ ವಿರುದ್ಧ ತೀವ್ರವಾಗಿ ಕೆಂಡ ಕಾರಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಯೋಜನಾ ಆಯೋಗದ ಬಳಿ ಜಗಳ ಮಾಡಿ ಹೆಚ್ಚಿನ ಯೋಜನೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ನವದೆಹಲಿಯಲ್ಲಿ ಗುಜರಾತ್ ರಾಜ್ಯಕ್ಕೆ 2009-10 ಹಣಕಾಸು ವರ್ಷದ ಯೋಜನೆಗಳನ್ನು ಅಂತಿಮಗೊಳಿಸಲು ಕರೆಯಲಾಗಿದ್ದ ಯೋಜನಾ ಆಯೋಗದ ಸಭೆಯಲ್ಲಿ ಮೋದಿ ಸರ್ವ ಸಿದ್ಧತೆಗಳೊಂದಿಗೇ ಬಂದಂತಿತ್ತು. ಕೇಂದ್ರವು ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಸಿಂಹಗಳ ಸಂರಕ್ಷಣೆಗೆ ನಯಾ ಪೈಸೆ ಕೊಡುತ್ತಿಲ್ಲ, ಆದರೆ ಹುಲಿಗಳ ರಕ್ಷಣೆಗೆ 200 ಕೋಟಿ ರೂ. ವ್ಯಯಿಸುತ್ತಿದೆ ಎಂದು ಮೋದಿ ಆರೋಪಿಸಿದರು. ಏಷ್ಯಾ ಸಿಂಹಗಳಿರುವ ದೇಶದ ಏಕೈಕ ತಾಣವೆಂದರೆ ಗುಜರಾತಿನ ಗಿರ್ ಅಭಯಾರಣ್ಯ.

ಯೋಜನಾ ಆಯೋಗದ ಸದಸ್ಯೆ ಸಯೀದಾ ಹಮೀದ್ ತಿರುಗಿಬಿದ್ದರು. ರಾಜ್ಯದ ವಾರ್ಷಿಕ ಯೋಜನೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒಂದೂ ಯೋಜನೆಯಿಲ್ಲ ಎಂದು ಆರೋಪಿಸಿದರು. ಇದನ್ನು ಊಹಿಸಿದ್ದ ಮೋದಿ, ರಾಜ್ಯದಲ್ಲಿ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರ ಉದ್ಧಾರಕ್ಕಾಗಿ ಯಾವೆಲ್ಲಾ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತ ಸಾಕ್ಷ್ಯಚಿತ್ರವನ್ನೇ ತೋರಿಸಿದರು. ರಾಜ್ಯದ ಅತ್ಯಧಿಕ ಆರ್ಥಿಕ ಅಭಿವೃದ್ಧಿ ದರ ಮತ್ತು ಅತೀ ಕಡಿಮೆ ಆದಾಯ-ಕೊರತೆಯ ಕುರಿತು ಈ ಸಾಕ್ಷ್ಯ ಚಿತ್ರವು ಬೆಳಕು ಚೆಲ್ಲಿತ್ತು.

ಈ ಚಿತ್ರ ಪ್ರದರ್ಶನವಾಗುತ್ತಿದ್ದಂತೆಯೇ, ಕೇಂದ್ರವು ಗುಜರಾತ್‌ಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹಣ ಒದಗಿಸುತ್ತಿಲ್ಲ ಎಂದು ದೂರಿದರು ಮೋದಿ. ನಾಲ್ಕು ರಾಜ್ಯಗಳಿಗೆ ನೀರು ಒದಗಿಸುತ್ತಿರುವ ನರ್ಮದಾ ನದಿಯನ್ನು ಗಂಗಾದಂತೆಯೇ ರಾಷ್ಟ್ರೀಯ ನದಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ ಮೋದಿ, ದಾಮನ್-ಗಂಗಾ-ಸಬರಮತಿ ನದಿ ಜೋಡಣೆಗೆ ಕೇಂದ್ರ ಅನುಮತಿ ನೀಡುವಂತೆ ಒತ್ತಾಯಿಸಿದರು. ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲಿ ಮಾಡಿರುವಂತೆ ತಮ್ಮ ರಾಜ್ಯದ ಕರಾವಳಿ ತೀರದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಪರಿಗಣಿಸಲೇ ಇಲ್ಲ ಎಂದು ಮೋದಿ ಕೆಂಡ ಕಾರಿದರು.

ಕೊನೆಗೆ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು 23,500 ಕೋಟಿ ರೂ. ಅಂದರೆ ಹಿಂದಿನ ವರ್ಷಕ್ಕಿಂತ ಶೇ.12ರಷ್ಟು ಹೆಚ್ಚು ಯೋಜನಾ ಗಾತ್ರ ಘೋಷಿಸಿ ಈ ಜಟಾಪಟಿಗೆ ತೆರೆ ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ