ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಮಾರಕ ನಾಶಗೊಳಿಸಿದರೆ ಪರಿಸ್ಥಿತಿ ನೆಟ್ಟಗಿರದು: ಮಾಯಾ (Mayawati | Dalit leaders' statues | Uttar pradesh | Samajwadi Party)
 
ದಲಿತ ನಾಯಕರ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ನಾಶಗೊಳಿಸುವುದಾಗಿ ಸಮಾಜವಾದಿ ಪಕ್ಷವು ಹಾಕಿರುವ ಬೆದರಿಕೆಗೆ ಮಾರುತ್ತರ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಇಂತಹ ಕ್ರಮಕ್ಕೇನಾದರೂ ಮುಂದಾದರೆ, ರಾಷ್ಟ್ರಾದ್ಯಂತ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಲಿದ್ದು ಇದು ರಾಷ್ಟ್ರಪತಿ ಆಳ್ವಿಕೆ ಹೇರಲು ದಾರಿಯಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.

"ಸಮಾಜವಾದಿ ಪಕ್ಷವು ಇಂತಹ ಕ್ರಮಕ್ಕೇನಾದರೂ ಮುಂದಾದರೆ, ಇದಕ್ಕೆ ರಾಷ್ಟ್ರಾದ್ಯಂತ ಬಲವಾದ ಪ್ರತಿಭಟನೆ ಎದುರಾಗಲಿದೆ ಮತ್ತು ಇದು ದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾಗಲಿದೆ" ಎಂಬುದಾಗಿ ಮಾಯಾವತಿ ಅವರು ಲಕ್ನೋದಲ್ಲಿ ಗುರುವಾರ ಕಾನ್ಶೀರಾಮ್ ಪರಿಸರ ಉದ್ಯಾನವನದ ಶಿಲನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಹೇಳಿದ್ದಾರೆ.

ಸ್ಮಾರಕಗಳು ಹಾಗೂ ಪ್ರತಿಮೆಗಳ ನಿರ್ಮಾಣಕ್ಕೆ ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಸಾರ್ವಜನಿಕರ ಹಣದ ದುರ್ಬಳಕೆ ಆರೋಪವು ಅವರ ಜಾತೀಯ ಮನೋಭಾವವನ್ನು ತೋರಿಸುತ್ತದೆ ಎಂದು ದೂರಿದ್ದಾರೆ. ಬಿಎಸ್ಪಿಯು ಮರಳಿ ಅಧಿಕಾರಕ್ಕೆ ಬಂದ ಬಳಿಕ ಅದು ಅಂಬೇಡ್ಕರ್ ಹಾಗೂ ಇತರ ದಲಿತ ನಾಯಕರ ಸ್ಮಾರಕ ಸ್ಥಳವನ್ನು ನಿರ್ಮಿಸಲು ಆರಂಭಿಸಿತು ಎಂದು ಅವರು ಹೇಳಿದ್ದಾರೆ.

ರಾಷ್ಟ್ರವನ್ನು 50 ವರ್ಷ ಹಾಗೂ ಉತ್ತರ ಪ್ರದೇಶವನ್ನು 40 ವರ್ಷ ಆಳಿದ ಕಾಂಗ್ರೆಸ್ ಪಕ್ಷವು ದಲಿತ ಹಾಗೂ ಇತರ ಹಿಂದುಳಿದ ಜಾತಿಗಳ ನಾಯಕರ ಸ್ಮಾರಕವನ್ನು ನಿರ್ಮಿಸಿರುತ್ತಿದ್ದರೆ, ಇದೀಗ ಈ ಎಲ್ಲಾ ನಿರ್ಮಾಣಗಳ ಅಗತ್ಯವಿರಲಿಲ್ಲ. ಆದರೆ ದುರದೃಷ್ಟಕರವೆಂದರೆ, ಕಾಂಗ್ರೆಸ್‌ಗೆ ನೆಹರೂ-ಗಾಂಧಿ ವಂಶದ ಆಚೆಗೆ ಯಾರೂ ಕಾಣುವುದಿಲ್ಲ ಎಂದು ಟೀಕಿಸಿದರು.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವು ರಾಜ್‌ಘಾಟ್‌ನಿಂದ ಹಿಡಿದು ರಾಷ್ಟ್ರದ ಇತರ ಪ್ರದೇಶಗಳಲ್ಲಿ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಸ್ಮಾರಕಗಳನ್ನು ನಿರ್ಮಿಸಲು ಹಲವಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ. ಆದರೆ, ಇದನ್ನು ಸರ್ಕಾರಿ ಬೊಕ್ಕಸದ ದುರುಪಯೋಗ ಎಂದು ಕರೆಯಲಾಗುತ್ತಿಲ್ಲ ಎಂದು ಅವರು ಆಪಾದಿಸಿದರು.

ಕಾಂಗ್ರೆಸ್ ಸರ್ಕಾರಗಳು ವ್ಯಯಿಸಿದ ಮೊತ್ತಕ್ಕೆ ಹೋಲಿಸಿದರೆ, ಬಿಎಸ್ಪಿ ಸರ್ಕಾರ ವ್ಯಯಿಸಿರುವ ಮೊತ್ತವು ನಗಣ್ಯವಾಗಿದೆ ಎಂದು ಅವರು ನುಡಿದರು. ಕಾಂಗ್ರೆಸ್ ತನ್ನದೇ ನಾಯಕರಾದ ರಾಜೇಂದ್ರ ಪ್ರಸಾದ್, ಸುಭಾಷ್ ಚಂದ್ರ ಬೋಸ್, ಗೋಪಾಲಕೃಷ್ಣ ಗೋಖಲೆಯವರಂತಹ ನಾಯಕರನ್ನು ನಿರ್ಲಕ್ಷ್ಯಿಸಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶ ಗೌರವಿಸಲಾಗಿದೆ
ತಮ್ಮ ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಿದೆ ಮತ್ತು ಜಾರಿಗೆ ತಂದಿದೆ ಎಂದ ಅವರು ಸರ್ಕಾರವು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು. ವಿರೋಧ ಪಕ್ಷಗಳ ಷಡ್ಯಂತ್ರದಿಂದಾಗಿ ಮಾಧ್ಯಮಗಳು ತಪ್ಪು ವರದಿ ಮಾಡಿವೆ ಎಂದ ಅವರು ಸುಳ್ಳುಗಳ ಆಧಾರದಲ್ಲಿ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ