ಮೊತ್ತಮೊದಲ ಬಾರಿಗೆ ಭಾರತೀಯ ವಾಯು ಪಡೆಯು ಎಎನ್-32 ವಿಮಾನ ಒಂದನ್ನು ಚೀನದೊಂದಿಗಿನ ಲೈನ್ ಆಪ್ ಆಕ್ಚುವಲ್ ಕಂಟ್ರೋಲ್(ಎಲ್ಎಸಿ)ಕ್ಕಿಂತ ಕೇವಲ 23 ಕಿ.ಮೀ ದೂರದ ಪಶ್ಚಿಮ ಲಡಕ್‌ನ ನ್ಯೋಮಾ ಸುಧಾರಿತ ಲ್ಯಾಂಡಿಂಗ್ ಗ್ರೌಂಡ್‌ನಲ್ಲಿ ಇಳಿಸಿದೆ.
ಈ ವಿಮಾನವನ್ನು ಇಲ್ಲಿ ಇಳಿಸಿರುವುದರಿಂದ, ಯಾವಾಗ ಬೇಕೆಂದರೆ ಆವಾಗ ಭಾರತವು ತನ್ನ ಪಡೆಯನ್ನು ತಕ್ಷಣಕ್ಕೆ ಮುಂಚಲನೆ ಮಾಡುವ ಸಾಮರ್ಥ್ಯ ಹೊಂದಿರುವುದು ಸಾಬೀತಾಗಿದೆ.
ಚೀನವು ಇತ್ತೀಚೆಗೆ ಎಲ್ಎಸಿಯಲ್ಲಿ ಭಾರತದತ್ತ ತೂರುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಐಎಎಫ್ ಈ ಕಾರ್ಯಕ್ಕೆ ಮುಂದಾಗಿದೆ. ಚೀನ ಹೆಲಿಕಾಫ್ಟರ್‌ಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದ್ದವು ಅಲ್ಲದೆ ಭಾರತೀಯ ವ್ಯಾಪ್ತಿಯಲ್ಲಿರುವ ಬಂಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಚೀನಿ ಅಕ್ಷರಗಳನ್ನು ಬರೆದಿತ್ತು.
ಶೌರ್ಯಚಕ್ರ ವಿಜೇತ ಸಮೂಹದ ಕ್ಯಾಫ್ಟನ್ ಎಸ್.ಸಿ. ಚಾಫೇಕರ್ ಅವರು ವಿಮಾನ ಹಾರಿಸಿದ್ದು, ಪಶ್ಚಿಮ ಏರ್ ಕಮಾಂಡ್(ಡಬ್ಲ್ಯುಎಸಿ) ಪ್ರಮುಖ ಏರ್ ಮಾರ್ಷಲ್ ಎನ್.ಎ.ಕೆ. ಬ್ರೌನಿ ಮತ್ತು ಉತ್ತರ ಏರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿ.ಸಿ. ಭಾರಾದ್ವಾಜ್ ಅವರುಗಳನ್ನು ಹೊತ್ತೊಯ್ದ ವಿಮಾನವು ನ್ಯೋಮಾದಲ್ಲಿ ಮುಂಜಾನೆ 6.25ಕ್ಕೆ ಇಳಿಯಿತು ಎಂಬುದಾಗಿ ಡಬ್ಲ್ಯುಎಸಿ ವಕ್ತಾರ ಪ್ರಿಯಾ ಜೋಷಿ ಹೇಳಿದ್ದಾರೆ.
ನ್ಯೋಮಾವು ಸಮುದ್ರ ಮಟ್ಟದಿಂದ 13,300 ಅಡಿಗಳಷ್ಟು ಎತ್ತರದಲ್ಲಿದೆ. ಇದು ಕಳೆದ ಎರಡು ವರ್ಷದಲ್ಲಿ ಜಮ್ಮು ಕಾಶ್ಮೀರದ ಲಡಕ್ ಪ್ರಾಂತ್ಯದಲ್ಲಿ ಸ್ಥಾಪಿಸಲಾಗಿರುವ ಮೂರನೆಯ ಎಎಲ್‌ಜಿ ಆಗಿದೆ.