ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಸ್ವಂತ್‌ರನ್ನು ಪಕ್ಷದಿಂದ ಉಚ್ಛಾಟಿಸಬೇಡಿ ಎಂದಿದ್ದ ಅಡ್ವಾಣಿ? (L K Advani | Jaswant Singh | Mohammed Ali Jinnah | Ananth Kumar)
 
ಆಗಸ್ಟ್ 19ರಂದು ಶಿಮ್ಲಾದಲ್ಲಿ ನಡೆದ 'ಚಿಂತನ್ ಬೈಠಕ್'ನಲ್ಲಿ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಹೊರ ಹಾಕುವ ನಿರ್ಧಾರವನ್ನು ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಬೆಂಬಲಿಸಿರಲಿಲ್ಲ ಎಂಬ ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ.

ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟನೆಗೊಳಿಸುವ ನಿರ್ಧಾರಕ್ಕೆ ಅಡ್ವಾಣಿ ಬೆಂಬಲ ಸೂಚಿಸಿರಲಿಲ್ಲ ಎಂದು ಮಾಜಿ ಸಲಹೆಗಾರ ಸುಧೀಂದ್ರ ಕುಲಕರ್ಣಿಯವರು ನೀಡಿದ್ದ ಹೇಳಿಕೆ ಸರಿಯೇ ಎಂಬುದಕ್ಕೆ ವಿರೋಧ ಪಕ್ಷದ ನಾಯಕ 'ಹೌದು' ಎಂದು ಖಚಿತಪಡಿಸಿದ್ದಾರೆ. ಇದರಿಂದ ಮಾಜಿ ವಿದೇಶಾಂಗ ಸಚಿವರನ್ನು ಹೊರ ದಬ್ಬುವ ನಡೆ ಅಡ್ವಾಣಿಯವರಿಗೆ ಅಪಥ್ಯವಾಗಿತ್ತು ಎಂಬುದು ಬಯಲಿಗೆ ಬಂದಿದೆ.

ಚಿಂತನ್ ಬೈಠಕ್‌ನಲ್ಲಿ ಜಸ್ವಂತ್ ಪರ ಮಾತನಾಡುವವರೇ ಇಲ್ಲದ ಕಾರಣ ಅಡ್ವಾಣಿಯವರ ದನಿ ಏಕಾಂಗಿಯಾಗಿತ್ತು. ಡಾರ್ಜಲಿಂಗ್ ಸಂಸದರನ್ನು ಪಕ್ಷದಿಂದ ಹೊರ ಹಾಕಬೇಡಿ. ಅಂತಹ ಕಠಿಣ ಕ್ರಮದ ಬದಲು ಪಕ್ಷದ ಸಂಸದೀಯ ಸಮಿತಿ ಅಥವಾ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅವರನ್ನು ಹೊರಗಿಡಿ ಎಂದು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಶ್ಲಾಘಿಸಿ ಪುಸ್ತಕ ಬರೆದಿದ್ದ ಜಸ್ವಂತ್‌ರನ್ನು ರಕ್ಷಿಸಲು ಅಡ್ವಾಣಿ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಜಸ್ವಂತ್ ಉಚ್ಛಾಟನೆ ಮಾಡುವ ಕುರಿತು ಅಡ್ವಾಣಿಯವರು ಪ್ರಬಲ ವಿರೋಧ ವ್ಯಕ್ತಪಡಿಸಿದರೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಲುವಿಗೆ ಹೆಚ್ಚು ಬೆಂಬಲ ವ್ಯಕ್ತವಾಯಿತು. ಸರ್ದಾರ್ ವಲ್ಲಭಭಾಯ್ ಪಟೇಲ್ ಕುರಿತು ಕೆಟ್ಟ ಭಾವನೆ ಬರುವಂತೆ ಮಾಡಿರುವ ಜಸ್ವಂತ್‌ರನ್ನು ಪಕ್ಷದಿಂದ ಹೊರ ಹಾಕಬೇಕು ಎಂಬ ಅವರ ಒತ್ತಾಯಕ್ಕೆ ಕರ್ನಾಟಕ ಸಂಸದ ಅನಂತ್ ಕುಮಾರ್ ಮತ್ತು ವಿನಯ್ ಕಟಿಯಾರ್ ಕೂಡ ಬೆಂಬಲ ಸೂಚಿಸಿದರು ಎಂದು ಹೇಳಲಾಗಿದೆ.

ಜಿನ್ನಾರನ್ನು ಹೊಗಳಿ ಪುಸ್ತಕ ಬರೆದ ಹಿನ್ನೆಲೆಯಲ್ಲಿ ಬಿಜೆಪಿ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಹೊರ ಹಾಕಿತ್ತು. ಇದಕ್ಕೆ ಪ್ರಮುಖ ಕಾರಣ ಅಡ್ವಾಣಿಯವರೆಂದೇ ಹೇಳಲಾಗಿತ್ತು. ಉಚ್ಛಾಟನೆ ನಂತರ ಜಸ್ವಂತ್ ಕೂಡ ಅಡ್ವಾಣಿಯವರ ಮೇಲೆ ತರಹೇವಾರಿ ಆರೋಪಗಳನ್ನು ಮಾಡುವ ಮೂಲಕ ಕಾರಣಕರ್ತ ಅವರೇ ಎಂಬಂತೆ ಬಿಂಬಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ