ಕಳೆದ ವರ್ಷ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಬಡ ವಿಧವೆ ಕಲಾವತಿ ಬಂಡೂರ್ಕರ್, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ವಿದರ್ಭ ಜನಾಂದೋಲನ ಸಮಿತಿಯಿಂದ ಸ್ಪರ್ಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕಲಾವತಿಯವರ ಹೆಸರು ಪ್ರಸ್ತಾಪಿಸಿದ ನಂತರ ಕಲಾವತಿ ಮಹಾರಾಷ್ಟ್ರದ ವಿದರ್ಭ ಪ್ರದೇಶದ ರೈತರ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಬೆಳೆಹಾನಿಯಿಂದಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆಗೆ ಮೊರೆಹೋಗಿದ್ದಾರೆ.
ವಿದರ್ಭ ಜನಾಂದೋಲನ ಸಮಿತಿಯ ಅಧ್ಯಕ್ಷ ಕಿಶೋರ್ ತಿವಾರಿ ಮಾತನಾಡಿ, ವಿದರ್ಭದ ಜಲ್ಕಾ ಗ್ರಾಮದಲ್ಲಿರುವ ಕಲಾವತಿ ಅಕ್ಟೋಬರ್ 13 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಜುಲೈ 22 ರಂದು ಜಲ್ಕಾ ಗ್ರಾಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತಮ್ಮ ಭಾಷಣದಲ್ಲಿ ಬಡ ,ವಿಧವೆ ಕಲಾವತಿಯ ಹೆಸರನ್ನು ಪ್ರಸ್ತಾಪಿಸಿದ್ದರು.