ಹೈದರಾಬಾದ್, ಭಾನುವಾರ, 20 ಸೆಪ್ಟೆಂಬರ್ 2009( 09:11 IST )
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಮತ್ತು ಇನ್ನೂ ನಾಲ್ವರು ದುರಂತ ಸಾವಿಗೀಡಾದ ದುರ್ದೈವಿ ಬೆಲ್ 430 ವಿಮಾನದ ಕಾಕ್‌ಪಿಟ್ ಧ್ವನಿಮುದ್ರಿಕೆಯ ವಿವರಗಳು ಇನ್ನು ಏಳು ದಿನಗಳಲ್ಲಿ ತಿಳಿದುಬರಲಿದೆ. ಅಪಘಾತದಲ್ಲಿ ಮೃತಪಟ್ಟ ಎಲ್ಲ ಐವರ ಕೊನೆಯ ಮಾತುಗಳು ಧ್ವನಿಮುದ್ರಿಕೆಯಲ್ಲಿ(ಸಿವಿಆರ್) ದಾಖಲಾಗಿವೆಯೆಂದು ಸಿಬಿಐ ಡಿಐಜಿ ಲಕ್ಷ್ಮಿನಾರಾಯಣ ತಿಳಿಸಿದರು.
ಪ್ರಸಕ್ತ ಅಮೆರಿಕ ತಜ್ಞರಿಂದ ಸಿವಿಆರ್ ಸಂಕೇತಾಕ್ಷರಗಳನ್ನು ಬಿಡಿಸಲಾಗುತ್ತಿದ್ದು, ಮೃತರ ಅಂತಿಮ ಪದಗಳು ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಒದಗಿಸುತ್ತದೆಂದು ಹೇಳಿದ ಅವರು ಇನ್ನು 7 ದಿನಗಳಲ್ಲಿ ಇದು ತಿಳಿದುಬರುತ್ತದೆಂದು ನುಡಿದರು. ಲಭ್ಯವಾದ ಸಾಕ್ಷ್ಯದ ಆಧಾರದ ಮೇಲೆ ಅಪಘಾತ ಆಕಸ್ಮಿಕವಾಗಿ ಸಂಭವಿಸಿದ್ದೆಂದು ಆರಂಭಿಕ ಅಭಿಪ್ರಾಯವನ್ನು ಸಿಬಿಐ ವ್ಯಕ್ತಪಡಿಸಿದ್ದರೂ, ಸಿವಿಆರ್ ದೃಢ ಸಾಕ್ಷ್ಯವನ್ನು ನೀಡುತ್ತದೆಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.ಈ ಹಂತದಲ್ಲಿ ಇದೊಂದು ಅಪ್ಪಟ ಅಪಘಾತವೆಂದು ಹೇಳಲು ಸಿಬಿಐ ಬಯಸುತ್ತಿಲ್ಲ.
ಏಕೆಂದರೆ ಏಜೆನ್ಸಿಗೆ ತನಿಖೆ ಹಸ್ತಾಂತರಿಸುವಾಗ ಭೀಕರ ಅಪಘಾತಕ್ಕೆ ಕಾರಣವಾದ ಎಲ್ಲ ಸಂದರ್ಭಗಳ ತನಿಖೆ ನಡೆಸುವಂತೆ ಷರತ್ತು ವಿಧಿಸಲಾಗಿತ್ತೆಂದು ಹೇಳಲಾಗಿದೆ. ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೆ.ರೋಸಯ್ಯ, ಮುಖ್ಯ ಕಾರ್ಯದರ್ಶಿ ರಮಾಕಾಂತ್ ರೆಡ್ಡಿ, ಡಿಜಿಪಿ ಯಾದವ್, ಗುಪ್ತಚರ ಮುಖ್ಯಸ್ಥ ಕೆ. ಅರವಿಂದ ರಾವ್ ಅವರನ್ನು ಪ್ರಶ್ನಿಸಲಾಗುವುದು.
ರಾಜಶೇಖರ ರೆಡ್ಡಿ ಅವರು ಸೆ.2ರಂದು ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದಂತೆ ಅವರ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿತ್ತೇ ಎಂದು ಸ್ಥಿರಪಡಿಸುವುದು ಸಿಬಿಐಗೆ ಅಗತ್ಯವಾಗಿದೆ. ಹಾಗೆ ನಿಗಾ ವಹಿಸಿದ್ದರೆ ಹೆಲಿಕಾಪ್ಟರ್ ಕಾಣೆಯಾಗಿದ್ದನ್ನು ಮೊದಲಿಗೆ ಪತ್ತೆಹಚ್ಚಿದವರು ಯಾರೆಂದು ಸಿಬಿಐ ತನಿಖೆ ನಡೆಸಲಿದೆಯೆಂದು ಮೂಲಗಳು ಹೇಳಿವೆ.