ಚೆನ್ನೈನ ತಿರುವಲ್ಲೂರು ಜಿಲ್ಲೆಯ ನೆರೆಯಲ್ಲಿರುವ ಚೋಳಾವರಂನಲ್ಲಿ ತನ್ನ ನಿವಾಸದಲ್ಲಿ ಐದನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಮೈಗೆ ಬೆಂಕಿಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಅವಹೇಳನ ಮಾಡುವುದರಿಂದ ಮಾನಸಿಕವಾಗಿ ನೊಂದ ಮಕ್ಕಳು ಅತಿರೇಕದ ಕ್ರಮಕ್ಕೆ ಮುಂದಾಗಬಹುದೆಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ.
ತಮಿಳು ವಿಷಯದಲ್ಲಿ ತೀರಾ ಕಡಿಮೆ ಅಂಕ ಗಳಿಸಿದ ಬಾಲಕನಿಗೆ ಶಿಕ್ಷಕರು ವಾಚಾಮಗೋಚರವಾಗಿ ಬೈದಿದ್ದೇ ಬಾಲಕ ಅತಿರೇಕದ ಆತ್ಮಹತ್ಯೆಗೆ ಗುರಿಯಾಗಲು ಕಾರಣವೆಂದು ತಿಳಿದುಬಂದಿದೆ. ಬಾಲಕನ ತಾಯಿ ನೀಡಿದ ದೂರಿನ ಮೇಲೆ , ಪೊಲೀಸರು ಶಿಕ್ಷಕರನ್ನು ಬಂಧಿಸಿದ್ದು, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.10 ವರ್ಷ ಪ್ರಾಯದ ಆಂಟೋನಿ ಪ್ರತೀಶ್ ತಮಿಳು ತ್ರೈಮಾಸಿಕ ಪರೀಕ್ಷೆಯನ್ನು ಬರೆಯುತ್ತಿದ್ದಾಗ ಸೆ.17ರಂದು ಮೇಲಿನ ಘಟನೆ ನಡೆದಿದೆ.
ಪರೀಕ್ಷೆಯ ಸಂದರ್ಭದಲ್ಲಿ ಬಾಲಕನ ಶಿಕ್ಷಕಿಯಾದ ವಿಜಯಲಕ್ಷ್ಮಿ ಬಾಲಕನ ಕೈಯಲ್ಲಿದ್ದ ಉತ್ತರಪತ್ರಿಕೆಗಳನ್ನು ಕಸಿದುಕೊಂಡು ಗಟ್ಟಿಯಾಗಿ ಕಿರುಚಿದರೆಂದು ತಿಳಿದುಬಂದಿದೆ. ತಮಿಳು ವಿಷಯದಲ್ಲಿ ಕೆಟ್ಟದಾಗಿ ಉತ್ತರ ಬರೆದರೆ ನಿನ್ನನ್ನು ನಾಲ್ಕನೇ ತರಗತಿಗೆ ಕಳಿಸುವುದಾಗಿ ಬೆದರಿಕೆ ಕೂಡ ಹಾಕಿದರೆಂದು ಹೇಳಲಾಗಿದೆ.
ತರಗತಿಯಲ್ಲಿ ಬೇರೆ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿ ಕ್ಲಾಸ್ ಟಾಪರ್ ಎನಿಸಿದ್ದರೂ ಬಾಲಕ ತಮಿಳಿನಲ್ಲಿ ಕಡಿಮೆ ಅಂಕ ತೆಗೆಯುತ್ತಿದ್ದ.ಶಿಕ್ಷಕಿ ಬೈದಿದ್ದರಿಂದ ತೀವ್ರವಾಗಿ ನೊಂದ ಲಾರಿ ಚಾಲಕನ ಪುತ್ರ ಪ್ರತೀಶ್, ತನ್ನ ತಾಯಿಗೆ ವಿಷಯ ಮುಟ್ಟಿಸಿದ. ಆದರೆ ಬೆಂಕಿಗೆ ತುಪ್ಪ ಸುರಿದಂತೆ ತಾಯಿ ಕೂಡ ಪ್ರತೀಶನಿಗೆ ನಿಂದಿಸಿದಾಗ ಪ್ರತೀಶ ಮನಸ್ಸಿಗೆ ಆಘಾತವಾಯಿತು. ಇದಾದ ಬಳಿಕ ತಾಯಿ ಅವನನ್ನು ಸಮಾಧಾನ ಪಡಿಸಲು ಯತ್ನಿಸಿದರು.
ತೀವ್ರ ನಿರಾಶನಾಗಿದ್ದ ಪ್ರತೀಶ್, ಸೀಮೆಎಣ್ಣೆ ಕ್ಯಾನ್ ತೆಗೆದುಕೊಂಡು ಮನೆಯ ಟೆರೇಸ್‌ಗೆ ತೆರಳಿ ಮೈಗೆ ಬೆಂಕಿ ಹಚ್ಚಿಕೊಂಡನೆಂದು ತಿಳಿದುಬಂದಿದೆ. ಆ ಸಂದರ್ಭದಲ್ಲಿ ಪ್ರತೀಶ್ ತಾಯಿ ಮನೆಯಲ್ಲಿರಲಿಲ್ಲ. ಅವನ ಕೂಗು ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಅವನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಶೇ.80 ಸುಟ್ಟಗಾಯಗಳಾಗಿದ್ದ ಪ್ರತೀಶ್ ಸಾವಿಗೆ ಶರಣಾದ.