ಪ್ರಖ್ಯಾತ ಸಿತಾರ್ ವಾದಕಿ ಅನೌಷ್ಕ ಶಂಕರ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 386ನೇ ಅಡಿಯಲ್ಲಿ ಜುನೈದ್ ಮಹಮದ್ ಎಂಬವನನ್ನು ಪೊಲೀಸರು ಬಂಧಿಸಿದ್ದು, ಅವನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅನೌಷ್ಕ ತಂದೆಯಾದ ಸಿತಾರ್ ದಂತಕತೆ ಪಂಡಿತ್ ರವಿ ಶಂಕರ್ ನೀಡಿದ ದೂರಿನ ಮೇಲೆ ಜುನೈದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಜುನೇದ್ ತಮ್ಮ ಪುತ್ರಿಗೆ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾನೆಂದು ರವಿಶಂಕರ್ ದೂರು ನೀಡಿದ್ದರು.ಆರೋಪಿಯು ಅನೌಷ್ಕ ಅವರ ಈಮೇಲ್ ಅಕೌಂಟ್ ಮತ್ತು ಅವರ ಖಾಸಗಿ ಚಿತ್ರಗಳನ್ನು ಹೊಂದಿದ್ದನೆಂದು ಹೇಳಲಾಗಿದೆ. ಅನೌಷ್ಕ ಚಿತ್ರಗಳನ್ನು ಆಕೆಗೆ ಹಿಂತಿರುಗಿಸುವುದಕ್ಕೆ ಪ್ರತಿಯಾಗಿ ಆಕೆಯಿಂದ ಹಣ ಸುಲಿಗೆ ಮಾಡಲು ಅವನು ಪ್ರಯತ್ನಿಸುತ್ತಿದ್ದನೆಂದು ವರದಿಯಾಗಿದೆ.
ಅಮೆರಿಕದಲ್ಲಿ ವಾಸಿಸುವ ರವಿಶಂಕರ್ ಈ ಕುರಿತು ಪೊಲೀಸರಿಗೆ ದೂರು ನೀಡಿ, ಅನೌಷ್ಕ ದಕ್ಷಿಣ ದೆಹಲಿಯಲ್ಲಿ ಸರ್ವೀಸ್ ಸೆಂಟರ್‌ಗೆ ತಮ್ಮ ಲ್ಯಾಪ್‌ಟಾಪ್ ನೀಡಿದ್ದಾಗ, ಆರೋಪಿಯು ಅನೌಷ್ಕ ಈ ಮೇಲ್ ವಿಳಾಸಕ್ಕೆ ಅನೇಕ ಸಂದೇಶ ಕಳಿಸಿ, ಅನೌಷ್ಕ ಖಾಸಗಿ ಚಿತ್ರಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ. ಒಂದು ಈಮೇಲ್‌ನಲ್ಲಿ ಚಿತ್ರಗಳ ವಾಪಸಿಗೆ ಒಂದು ಲಕ್ಷ ಡಾಲರ್ ನೀಡಬೇಕೆಂದು ಕೇಳಿದ್ದ.
ಅಹ್ಮದ್ ಜಾಡು ಹಿಡಿದ ದೆಹಲಿ ಪೊಲೀಸ್ ತಂಡ ಮುಂಬೈನಲ್ಲಿ ಅವನನ್ನು ಬಂಧಿಸಿತು. ಆರೋಪಿಯು ತಪ್ಪಿತಸ್ಥನೆನಿಸಿದರೆ 10 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಲಿದ್ದಾನೆ.