ಮಹಾರಾಷ್ಟ್ರದಲ್ಲಿ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿವುಳಿದಿರುವಂತೆ ಶಿವಸೇನೆಯಲ್ಲಿ ಹೊಗೆಯಾಡುತ್ತಿರುವ ಭಿನ್ನಮತ ಬೀದಿಗಳಿಗೆ ಇಳಿದಿದೆ. ಶಿವಸೇನೆ ಶಾಸಕರೊಬ್ಬರ ಬೆಂಬಲಿಗರು ಭಾನುವಾರ ಮುಂಬೈನ ಶಿವಾಜಿಪಾರ್ಕ್‌ನಲ್ಲಿರುವ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರ ಮನೆಯಲ್ಲಿ ದಾಂಧಲೆ ನಡೆಸಿದರಲ್ಲದೇ ಹೂಕುಂಡಗಳನ್ನು ಒಡೆದುಹಾಕಿದರು ಮತ್ತು ಕಾರಿಗೆ ಜಖಂ ಮಾಡಿದರು.
ಸಾದಾ ಸರ್ವಾಂಕರ್ ಬೆಂಬಲಿಗರೆಂದು ಹೇಳಲಾದ ಗುಂಪು, ಜೋಷಿ ಮನೆಯ ಹೊರಗೆ ಘೋಷಣೆಗಳನ್ನು ಕೂಗಿತು. ಶಿವಸೇನೆ ಸರ್ವಾಂಕರ್ ಬದಲಿಗೆ ಮಿಲಿಂದ್ ವೈದ್ಯರನ್ನು ದಾದರ್ ಕ್ಷೇತ್ರದಿಂದ ನಿಲ್ಲಿಸಲು ಯೋಜಿಸಿದೆಯೆಂಬ ಊಹಾಪೋಹ ಹರಡಿದ್ದರಿಂದ ಉದ್ರಿಕ್ತ ಗುಂಪು ದಾಂಧಲೆ ನಡೆಸಿತೆಂದು ಶಾಸಕರಿಗೆ ಆಪ್ತಮೂಲಗಳು ಹೇಳಿವೆ.ಮುಂಬೈಯ ಮಾಜಿ ಮೇಯರ್ ಆಗಿದ್ದ ವೈದ್ಯ ಜೋಷಿಯವರ ನಿಕಟವರ್ತಿಯೆಂದು ಹೇಳಲಾಗಿದೆ.
ಸುಮಾರು 3 ಬಸ್‌ಗಳಲ್ಲಿ ಆಗಮಿಸಿದ 100 ಜನ ಶಿವಸೈನಿಕರು ಜೋಷಿ ಮನೆಯ ಹೊರಗೆ ಠಿಕಾಣಿ ಹೂಡಿದ್ದಲ್ಲದೇ ದಾಂಧಲೆ ಎಬ್ಬಿಸಿದರೆಂದು ತಿಳಿದುಬಂದಿದೆ.