ರೋಹ್ಟಕ್ (ಹರಿಯಾಣ), ಸೋಮವಾರ, 21 ಸೆಪ್ಟೆಂಬರ್ 2009( 10:02 IST )
ಸಗೋತ್ರವಾಗಿರುವುದಕ್ಕೆ ತನ್ನ ಪ್ರೇಮಿಯನ್ನು ಮದುವೆಯಾಗಲು ಬಿಟ್ಟಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ತನ್ನ ಹೆತ್ತವರು ಸೇರಿದಂತೆ ಕುಟುಂಬದ ಏಳು ಮಂದಿಗೆ ವಿಷವಿಕ್ಕಿ ನಂತರ ಅವರ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯ ಕಾಬೂಲ್‌ಪುರದಲ್ಲಿ ನಡೆದಿದೆ.
ಕೃತ್ಯದಲ್ಲಿ ಭಾಗಿಯಾದ ಸೋನಮ್ ಮತ್ತು ಆಕೆಯ ಪ್ರಿಯಕರ ನವೀನ್ ಎಂಬವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಒಂದೇ ಗ್ರಾಮದವರಾದ ನವೀನ್ ಹಾಗೂ ಸೋನಮ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರದ್ದೂ ಒಂದೇ ಗೋತ್ರವಾಗಿತ್ತು. ಹಾಗಾಗಿ ಸ್ವಗೋತ್ರದ ಹಿನ್ನೆಲೆಯಲ್ಲಿ ಸೋನಮ್ ಕುಟುಂಬ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಇದರಿಂದ ಸಿಟ್ಟಿಗೆದ್ದ ಪ್ರೇಮಿಗಳಿಬ್ಬರೂ ಕುಟುಂಬಕ್ಕೇ ವಿಷವಿಕ್ಕಿದ್ದಾರೆ. ನವೀನ್ ತಂದುಕೊಟ್ಟ ವಿಷವನ್ನು ಊಟದಲ್ಲಿ ಹಾಕಿ ಸೋನಮ್ ತನ್ನ ಕುಂಟುಂಬದ ಸದಸ್ಯರಿಗೆ ಬಡಿಸಿದ್ದಾಳೆ. ವಿಷದ ಊಟ ತಿಂದ ಕುಟುಂಬದ ಸದಸ್ಯರೆಲ್ಲರೂ ಪ್ರಜ್ಞೆ ತಪ್ಪಿದ್ದಾರೆ. ನಂತರ ನವೀನ್‌ನನ್ನು ಮನೆಗೆ ಕರೆಯಿಸಿಕೊಂಡ ಸೋನಮ್, ಪ್ರಜ್ಞೆ ತಪ್ಪಿದ್ದ ತಂದೆ, ತಾಯಿ, ಸಹೋದರ, ಸಹೋದರಿ, ಅಜ್ಜಿ ಸೇರಿದಂತೆ ಒಟ್ಟು ಏಳು ಜನರ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.