ಮುಂಬೈ ನರಮೇಧದ ರೂವಾರಿ ಹಫೀಜ್ ಸಯೀದ್ ವಿರುದ್ಧ ಎಲ್ಲಾ ಸಾಕ್ಷ್ಯಗಳು ಪಾಕಿಸ್ತಾನದಲ್ಲೇ ಇರುವ ಕಾರಣ, ಮುಂಬೈ ದಾಳಿಯ ಕುರಿತು ಆತನ ವಿರುದ್ಧ ಪಾಕಿಸ್ತಾನದಲ್ಲಿ ತನಿಖೆ ನಡೆಸಬೇಕು ಎಂಬುದಾಗಿ ಗೃಹ ಸಚಿವ ಪಿ. ಚಿದಂಬರಂ ಸೋಮವಾರ ಒತ್ತಾಯಿಸಿದ್ದಾರೆ.
ಹಫೀಜ್ ಸಯೀದ್‌ನನ್ನು ಗೃಹಬಂಧನಕ್ಕೆ ಈಡು ಮಾಡಿರುವುದರ ಕುರಿತು ಸುದ್ದಿಗಾರರು ಅವರ ಅಭಿಪ್ರಾಯ ಕೇಳಿದ ವೇಳೆ ಪ್ರತಿಕ್ರಿಯೆ ನೀಡಿರುವ ಚಿದಂಬರಂ ಅವರು, "ಇದೊಂದು ಮುಖ ಉಳಿಸುವ ತಂತ್ರವಾದರೂ ತನ್ನಿಂದೇನೂ ಆಕ್ಷೇಪವಿಲ್ಲ" ಎಂದು ಹೇಳಿದರು.
"ಇದೀಗ ಬಂಧನಕ್ಕೀಡಾಗಿರುವ ಆತನ್ನು ಮುಂಬೈ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಬೇಕು ಎಂಬುದು ನನ್ನ ಒತ್ತಾಯ. ದಾಳಿಯಲ್ಲಿ ಆತನ ಪಾತ್ರವೇನು ಎಂಬುದು ತನಿಖೆಗೊಳಬೇಕಿದೆ" ಎಂದು ನುಡಿದರು. ಅವರು ಸಮಾರಂಭ ಒಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತರು.
"ಆತನ ವಿರುದ್ಧ ಪುರಾವೆಯು ಪಾಕಿಸ್ತಾನದ ನೆಲದಲ್ಲಿದೆ. ಪಾಕಿಸ್ತಾನವು ನಮ್ಮ ಬಳಿ ಪುರಾವೆ ಕೇಳುತ್ತಿದೆ. ಆದರೆ ಪುರಾವೆಯು ಭಾರತದ ನೆಲದಲ್ಲಿಲ್ಲ. ಎಲ್ಲಾ ಪುರಾವೆಯು ಪಾಕಿಸ್ತಾನದ ನೆಲದಲ್ಲಿದೆ. ಹಾಗಾಗಿ ಆತರ ವಿರುದ್ಧ ತನಿಖೆಯು ಪಾಕಿಸ್ತಾನದಲ್ಲಿ ನಡೆಯಬೇಕಿದೆ" ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಶುಕ್ರವಾರ ಸಯೀದ್ ವಿರುದ್ಧ ದಾಖಲಿಸಲಾಗಿರುವ ಎರಡು ಎಫ್ಐಆರ್‌ಗಳು 26/11ಕ್ಕೆ ಸಂಬಂಧಿಸಿದ್ದು ಅಲ್ಲ ಎಂದು ಚಿದಂಬರಂ ಹೇಳಿದ್ದಾರೆ.