ರಾಜೀವ್ ಹತ್ಯಾಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಹಾಗೂ ಆಕೆಯ ಪತಿ ಮುರುಗನ್ ಅವರಗಳು ಸದ್ಯವೇ ಎಂಸಿಎ ಪದವಿ ಪಡೆಯಲಿದ್ದಾರೆ. ಈ ಇಬ್ಬರು ಸದ್ಯವೇ ಇಂದಿರಾ ಗಾಂಧಿ ಮುಕ್ತ ವಿವಿ(ಇಗ್ನೂ)ಯ ಎಂಸಿಎ ವಿದ್ಯಾರ್ಥಿಗಳಾಗಿದ್ದಾರೆ.
"ನಳಿನಿ ತನ್ನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ್ದು, ಪ್ರಥಮಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಆಕೆ ಉತ್ತಮ ಅಂಕಗಳೊಂದಿಗೆ ಎಲ್ಲಾ ವಿಷಯಗಳಲ್ಲಿ ಪಾಸಾಗಿದ್ದಾಳೆ. ಆಕೆಯ ಪತಿ ಮುರುಗನ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು ಆತನೂ ಸದ್ಯವೇ ಕೋರ್ಸ್ ಮುಗಿಸಲಿದ್ದಾನೆ" ಎಂಬುದಾಗಿ ಇಗ್ನೂ ಪ್ರಾದೇಶಿಕ ನಿರ್ದೇಶಕ ಕೆ. ಪನೀರ್ ಸೆಲ್ವಂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಂಸಿಎ ಪರೀಕ್ಷೆ ಬರೆದಿರುವ ಕೈದಿಗಳನ್ಲಿ ನಳಿನಿ ಮೊದಲ ಸ್ಥಾನ ಗಳಿಸಿದ್ದಾಳೆ ಎಂಬುದಾಗಿ ಅವರು ತಿಳಿಸಿದ್ದಾರೆ. ನಳಿನಿಯು ಎಂಸಿಎ ಪದವಿ ಪಡೆಯಲಿರುವ ತಮಿಳ್ನಾಡಿನ ಮೊದಲ ಕೈದಿಯಾಗಲಿದ್ದಾಳೆ. ಈ ಪತಿ-ಪತ್ನಿಯರು ಎಲ್ಲಾ ಸೆಮಿಸ್ಟರ್‌ಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
ನಳಿನಿಗೆ ಜೈಲು ಸಂಕೀರ್ಣದಲ್ಲೇ ಪದವಿ ಪ್ರಧಾನ ಮಾಡುವಂತೆ ತಾವು ವಿವಿಯ ಉಪಕುಲಪತಿಗಳನ್ನು ವಿನಂತಿಸಿದ್ದೇವೆ ಎಂಬುದಾಗಿ ಅವರು ಹೇಳಿದರು. ನಳಿನಿ ಹಾಗೂ ಆಕೆಯ ಪತಿ ಮುರುಗನ್ ಇಬ್ಬರೂ ಪ್ರಸಕ್ತ ಬಿಗಿ ಭದ್ರತೆಯ ವೆಲ್ಲೂರು ಜೈಲಿನಲ್ಲಿದ್ದಾರೆ.