ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬನ್ನಿ ಆರೆಸ್ಸೆಸ್ ಸೇರಿ: ಮುಸ್ಲಿಂ, ಕ್ರೈಸ್ತರಿಗೆ ಭಾಗ್ವತ್ (RSS | Muslim | Christian | Mohan Bhagwat | Minority | Religion)
 
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬಂದು ಸೇರಿ, ಅದು ಹೇಗಿದೆ ಎಂದು ತಿಳಿದುಕೊಂಡು, ಆ ಬಳಿಕ ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿ ಎಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಕರೆ ನೀಡಿದ್ದಾರೆ.

ನಮ್ಮ ಉದ್ದೇಶ ಸ್ಪಷ್ಟವಾಗಿರುವುದರಿಂದ ಮತ್ತು ನಮ್ಮ ನಡವಳಿಕೆಯೂ ಒಳ್ಳೆಯದೇ ಇರುವುದರಿಂದ ಖಂಡಿತವಾಗಿಯೂ ನೀವು ಇದರಲ್ಲೇ ಮುಂದುವರಿಯುತ್ತೀರಿ ಎಂದು ಆರೆಸ್ಸೆಸ್‌ನ ದಸರಾ ರ‌್ಯಾಲಿಯಲ್ಲಿ ಭಾನುವಾರ ಮಾತನಾಡಿದ ಭಾಗವತ್ ನುಡಿದರು.

ಭಾರತದಲ್ಲಿರುವ ಎಲ್ಲ ಮುಸ್ಲಿಮರು ಹಿಂದೆ ಹಿಂದೂಗಳೇ ಆಗಿದ್ದರು. ಅವರು ಪೂಜಾ ವಿಧಾನವನ್ನು ಬದಲಿಸಿಕೊಂಡಿದ್ದಾರಷ್ಟೆ. ಇದನ್ನು ಅರಿತುಕೊಂಡರೆ ಅಲ್ಲಿ ಸಂಘರ್ಷವಿರುವುದಿಲ್ಲ ಎಂದ ಅವರು, ದೇಶದಲ್ಲಿ ಯಾವ ಸಮುದಾಯವೂ ಅಲ್ಪಸಂಖ್ಯಾತವಲ್ಲ. ಅವರೆಲ್ಲರೂ ಇಲ್ಲೇ ಬದುಕಬೇಕು, ಇಲ್ಲೇ ಅಳಿಯಬೇಕು. ನಮ್ಮೆಲ್ಲರಿಗೂ ಒಂದೇ ಪೂರ್ವಜರು ಇದ್ದರು ಮತ್ತು ನಮ್ಮೆಲ್ಲರ ಸಂಸ್ಕೃತಿಯೂ ಒಂದೇ ಆಗಿತ್ತು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ನುಡಿದರು.

ಬಲವಂತವಾಗಿ ಮತಾಂತರ ಮಾಡುತ್ತಿರುವ ಕ್ರಿಶ್ಚಿಯನ್ನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ತಮ್ಮ ಧರ್ಮ ಬದಲಾಯಿಸುವುದರಿಂದ ಯಾರು ಕೂಡ ದೇವರನ್ನು ಭೇಟಿಯಾಗುವುದು ಸಾಧ್ಯವಿಲ್ಲ. ಹೀಗಿರುವಾಗ, ಅವರೇಕೆ ಮತಾಂತರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ತನ್ನ ಪ್ರಭಾವನನ್ನು ದೇಶದ ಹಿತಾಸಕ್ತಿಗಾಗಿ ಮಾತ್ರವೇ ಆರೆಸ್ಸೆಸ್ ಬಳಸುತ್ತದೆ ಎಂದ ಭಾಗವತ್, ನಮ್ಮ ಪ್ರಭಾವವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಬಳಸುವುದಿಲ್ಲ ಎಂದರಲ್ಲದೆ, 'ನಾವು ಯಾವುದೇ ಪಕ್ಷದೊಂದಿಗೆ ಇಲ್ಲ, ಆದರೆ ರಾಷ್ಟ್ರೀಯತೆಯ ನೀತಿಗಳ ಪರವಾಗಿ ನಾವಿದ್ದೇವೆ' ಎಂದು ಸ್ಪಷ್ಟಪಡಿಸಿದರು.

ಕಾಮೆಂಟ್ ಮಾಡುವ ಮೊದಲು ದಯವಿಟ್ಟು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ