1998ರ ಪೋಕ್ರಾನ್ ಅಣು ಪರೀಕ್ಷೆಯ ಯಶಸ್ಸನ್ನು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದ ಡಿಆರ್‌ಡಿಓ ವಿಜ್ಞಾನಿ ಕೆ. ಸಂತಾನಂ ಅವರು, ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, ಅಧಿಕಾರಿಯು "ತಪ್ಪು ಮರದತ್ತ ನೋಡಿ ಬೊಗಳುತ್ತಿದ್ದಾರೆ" ಎಂದಿದ್ದಾರಲ್ಲದೆ, ಅವರು (ಎನ್ಎಸ್ಎ) ಪರೀಕ್ಷೆಯ ಅಳತೆಗಳು ಮತ್ತು ಮಾಹಿತಿಯ ಸರ್ವವನ್ನೂ ಬಲ್ಲವರೇನಲ್ಲ ಎಂದು ಹೇಳಿದ್ದಾರೆ.
ಎಂ.ಕೆ. ನಾರಾಯಣ್ ಅವರ ಹೇಳಿಕೆಗಳು ಅನವಶ್ಯಕ ಎಂದಿರುವ ಸಂತಾನಂ, ಪೋಕ್ರಾನ್ ಪರೀಕ್ಷೆಯ ಯಶಸ್ಸಿನ ತನಿಖೆಗಾಗಿ ಸ್ವತಂತ್ರ ಸಮಿತಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಾರತೀಯ ಮಹಿಳಾ ಪತ್ರಿಕಾ ನಿಗಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂತಾನಂ ಅವರು, "ನಾರಾಯಣನ್ ಅವರು ತಪ್ಪು ಮರದತ್ತ ಬೊಗಳುತ್ತಿದ್ದಾರೆ" ಎಂದು ಹೇಳಿದರು.
ಪೋಕ್ರಾನ್ II ಪರೀಕ್ಷೆಯ ವೇಳೆ ಬಳಸಿದ್ದ ಥರ್ಮೋನ್ಯೂಕ್ಲಿಯರ್ ಡಿವೈಸ್‌ನ ದಕ್ಷತೆಯನ್ನು ಅವರು ಕಳೆದ ತಿಂಗಳ ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು. 1998ರ ಮೇ 11 ರಂದು ನಡೆಸಲಾಗಿದ್ದ ಅಣುಪರೀಕ್ಷೆಯು ನಿರೀಕ್ಷಿತ ಯಶಸ್ಸು ನೀಡಿಲ್ಲದ ಕಾರಣ ಭಾರತವು ಇನ್ನಷ್ಟು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆ ಇದೆಯಲ್ಲದೆ, ಭಾರತ ಸಿಟಿಬಿಟಿಗೆ ಸಹಿ ಮಾಡಬಾರದು ಎಂದೂ ಹೇಳಿದ್ದರು.
ಸಂತಾನಂ ಹೇಳಿಕೆಯನ್ನು 'ಭೀಕರ' ಎಂದು ಹೇಳಿದ್ದ ನಾರಾಯಣನ್, ಸಂಶೋಧಕರ ಸಮೂಹವು ಪರೀಕ್ಷಿಸಿರುವ ಥರ್ಮೋನ್ಯೂಕ್ಲಿಯರ್ ಸಾಮರ್ಥ್ಯವನ್ನು ಭಾರತವು ಹೊಂದಿದೆ ಎಂದು ಹೇಳಿದ್ದರು.