ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ಸೈನಿಕ ಈಗ ಐಎಸ್ಐ ಏಜೆಂಟ್! ರಹಸ್ಯ ದಾಖಲೆ ಸಮೇತ ಸೆರೆ (ISI | agent | Patna | Sudhanshu Sudhakar)
 
ಐಎಸ್ಐ ಏಜೆಂಟನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಜಿ ಸೈನಿಕನೊಬ್ಬನನ್ನು ಪೊಲೀಸರು ಮಂಗಳವಾರ ಪಾಟ್ನಾದಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪಾಕಿಸ್ತಾನವು ಭಾರತದಲ್ಲಿ ಯೋಜಿಸಿರುವ ಬುಡಮೇಲು ಕೃತ್ಯಗಳ ಯೋಜನೆ ಮತ್ತೊಮ್ಮೆ ಬಯಲಿಗೆ ಬಂದಿದೆ.

ಸುಧಾಂಶು ಸುಧಾಕರ್ ಎಂಬ ಮಾಜಿ ಸೈನಿಕನಾಗಿರುವ ಈ ದೇಶದ್ರೋಹಿ ಕಾಠ್ಮಂಡುವಿನತ್ತ ತೆರಳುತ್ತಿದ್ದ ವೇಳೆಗೆ ಬಂಧನಕ್ಕೀಡಾಗಿದ್ದಾನೆ. ಸೀತಾಮಾರ್ಹಿ ಎಂಬಲ್ಲಿನವನಾಗಿರುವ ಈತನ ವಿರುದ್ಧ ಐದು ವರ್ಷಗಳ ಹಿಂದೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ನಡೆಸಲಾಗಿತ್ತು. ಈತನನ್ನು ವಿಚಾರಣೆಗೊಳಪಡಿಸಿದ ವೇಳೆ ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುತ್ತಿರುವುದು ಸೇರಿದಂತೆ ಇತರ ಸ್ಫೋಟಕ ವಿಚಾರಗಳು ಬಯಲಾಗಿವೆ.

ಸುಧಾಕರ್‌ನಿಂದ ರಹಸ್ಯ ಸೇನಾ ದಾಖಲೆಗಳು ಮತ್ತು ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಭಾರತೀಯ ಸೇನೆಯ ಚಲನವಲನಗಳ ಮೇಲೆ ನಿಗಾ ಇರಿಸಿ ಈ ಕುರಿತ ಮಾಹಿತಿಯನ್ನು ಕಾಠ್ಮಂಡುವಿನ ಪಾಕಿಸ್ತಾನಿ ಹೈ ಕಮಿಷನ್ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಕಳೆದೆರಡು ವರ್ಷಗಳಿಂದ ಈತ ಈ ದುಷ್ಕೃತ್ಯದಲ್ಲಿ ತೊಡಗಿದ್ದು ಈತನಿಗೆ ಐಎಸ್ಐ 50 ಸಾವಿರದಿಂದ ಒಂದು ಲಕ್ಷದ ತನಕ ಪಾವತಿಸುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಈ ತಿಂಗಳಲ್ಲಿ ಐಎಸ್ಐ ಏಜೆಂಟ್ ಬಂಧನಕ್ಕೀಡಾಗುತ್ತಿರುವುದು ಇದು ಎರಡನೆ ಬಾರಿಯಾಗಿದೆ. ಸೆಪ್ಟೆಂಬರ್ 12ರಂದು ಇಮ್ತಿಯಾಜ್ ಆಲಿ ಎಂಬಾತನನ್ನು ಕಾನ್ಪುರದಲ್ಲಿ ಬಂಧಿಸಲಾಗಿದ್ದು, ಈತನ ತನಿಖೆ ವೇಳೆಗೆ ಭಾರತೀಯ ಸೇನೆಯಲ್ಲಿ ಗೂಢಚರ್ಯೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ತಾನು ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವುದಾಗಿ ಆತ ಹೇಳಿದ್ದ.

ಅಂತರ್ಜಾಲ ಹಾಗೂ ದೂರವಾಣಿ ಮೂಲಕ ಭಾರತೀಯ ಸೇನೆಯ ಕುರಿತ ಮಾಹಿತಿಯನ್ನು ಗಡಿಯಾಚೆಗೆ ರವಾನಿಸುತ್ತಿದ್ದುದಾಗಿ ಆತ ಹೇಳಿದ್ದ. ಜಾನ್ಸಿಯವನಾಗಿರುವ ಅಲಿಯನ್ನು ಎಟಿಎಸ್ ಅಧಿಕಾರಿಗಳು ಲಕ್ನೋದಿಂದ 80 ಕಿಲೋಮೀಟರ್ ದೂರದಲ್ಲಿರುವ ಕಾನ್ಪುರದ ಭೌಟಿ ಪ್ರದೇಶದಿಂದ ಬಂಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ