ಚೀನಾವು ಭಾರತದ ನೆಲದೊಳಕ್ಕೆ ಅಕ್ರಮವಾಗಿ ನುಸುಳುತ್ತಿದೆ ಎಂಬ ವರದಿಗಳ ನಡುವೆಯೇ, ಚೀನ ರಾಯಭಾರಿ ಜಾಂಗ್ ಯಾನ್ ಅವರು ಮಂಗಳವಾರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಭೇಟಿಯ ಕುರಿತ ಮಾಹಿತಿಯನ್ನು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಯಭಾರಿ "ಏನೂ ಆಗುತ್ತಿಲ್ಲ. ನೀವು ನಿಮ್ಮ ನಾಯಕರನ್ನು ಆಲಿಸಿ" ಎಂದಷ್ಟೆ ನುಡಿದರು.
ಚೀನ ರಾಯಭಾರಿ ಪಿಳ್ಳೈ ಸುಮಾರು ಮುಕ್ಕಾಲು ಗಂಟೆ ಮಾತುಕತೆ ನಡೆಸಿದರು. ಕಳೆದ ವಾರ ಅವರು ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಚೀನ ಉಸ್ತುವಾರಿಯ ಜತೆ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿಯಾಗಿದ್ದರು.
ತನ್ನ ಸೇನೆಯು ಅತಿಕ್ರಮಣ ನಡೆಸುತ್ತಿದೆ ಎಂಬ ವರದಿಯನ್ನು ಚೀನ ನಿರಾಕರಿಸುತ್ತಲೇ ಬಂದಿದೆ. ಅದಾಗ್ಯೂ, ವಾಸ್ತವ ಗಡಿ ರೇಖೆಯ ಕುರಿತ ಕಲ್ಪನೆಯಲ್ಲಿನ ವ್ಯತ್ಯಾಸದಿಂದಾಗಿ ಅತಿಕ್ರಮಣಗಳು ನಡೆದಿದೆ ಎಂಬುದಾಗಿ ಇಲ್ಲಿನ ಸರ್ಕಾರ ಹೇಳುತ್ತಿದೆ.