ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಲ್ಟಾ ಹೊಡೆದ ಕಲಾವತಿ, ಚುನಾವಣೆಯಲ್ಲಿ ಸ್ಫರ್ಧಿಸಲ್ಲ (kalavati | rahul gandhi | elections | Vidarbha)
 
ಮಹಾರಾಷ್ಟ್ರದಲ್ಲಿ ಅಕ್ಟೋಬರ್ 13ರಂದು ನಡೆಯಲಿರುವ ಚುನಾವಣೆಯಲ್ಲಿ ವಿದರ್ಭ ಜನಾಂದೋಲನ ಸಮಿತಿ (ವಿಜೆಎಸ್) ವತಿಯಿಂದ ಚುನಾವಣೆಗೆ ಸ್ಫರ್ಧಿಸುತ್ತಾರೆ ಎಂದು ಹೇಳಲಾಗಿದ್ದ ಕಲಾವತಿ ಬಂಡೂರ್ಕರ್ ಅವರು ಇದೀಗ ತಾನು ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಕಲಾವತಿ ಬಂಡೂರ್ಕರ್ ಅವರನ್ನು ರಾಹುಲ್ ಗಾಂಧಿ ಸಂಸತ್ತಿನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಮೂಲಕ ದೇಶಕ್ಕೆ ಪರಿಚಯಿಸಿದ್ದರು.

ರೈತರ ಆತ್ಮಹತ್ಯೆಯಿಂದ ಕುಖ್ಯಾತಿ ಪಡೆದಿರುವ ವಿದರ್ಭದ ಯವತ್ಮಾಲ್ ಜಿಲ್ಲೆಯ ವಣ್ಣಿ ಕ್ಷೇತ್ರದಿಂದ ಕಲಾವತಿಯವರನ್ನು ಕಣಕ್ಕಿಳಿಸಲು ವಿಜೆಎಸ್ ನಿರ್ಧರಿಸಿತ್ತು. ಈ ಮೂಲಕ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಕೂಟವು ತಾನು ಬಡವರ ಪರ ಎಂಬುದಾಗಿ ಪ್ರಚಾರ ನಡೆಸುತ್ತಿರುವುದರ ವಿರುದ್ಧ ಸೆಡ್ಡು ಹೊಡೆಯಲು ಮುಂದಾಗಿತ್ತು.

ಪ್ರಮುಖ ಮರಾಠಿ ದೈನಿಕ ಒಂದಕ್ಕೆ ಸಂದರ್ಶನ ನೀಡಿರುವ ಕಲಾವತಿ "ಚುನಾವಣೆಯಲ್ಲಿ ಸ್ಫರ್ಧಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ, ತನಗೆ ಚುನಾವಣೆ ಎಂದರೇನು ಹಾಗೂ ರಾಜಕೀಯ ಎಂದರೇನು ಎಂಬುದೇ ತಿಳಿದಿಲ್ಲ" ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತನೊಬ್ಬನ ಪತ್ನಿಯಾಗಿರುವ ವಿಧವೆಯ ಬಡ ಪರಿಸ್ಥಿತಿಯನ್ನು ರಾಹುಲ್ ತನ್ನ ಭಾಷಣದಲ್ಲಿ ಎತ್ತಿ ತೋರಿದ್ದರು.

"ನನಗೆ ಚುನಾವಣೆಯಲ್ಲಿ ಸ್ಫರ್ಧಿಸುವ ಇಚ್ಚೆ ಇಲ್ಲ" ಎಂದಿರುವ ಕಲಾವತಿ, ಟಿವಿ ಕ್ಯಾಮರಾಗಳ ಎದುರು ತಾನು ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಘೋಷಣೆ ಮಾಡುವಂತೆ ವಿಜೆಎಸ್ ಕಾರ್ಯಕರ್ತರು ಒತ್ತಡ ಹೇರಿದ್ದಾರೆ ಎಂಬುದಾಗಿ ಅವರು ಆಪಾದಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ವಿಜೆಎಸ್ ನಾಯಕ ಕಿಶೋರ್ ತಿವಾರಿ "ಆಕೆಗೆ ಸುಲಭ್ ನೀಡಲುದ್ದೇಶಿಸಿರುವ ಹಣಕಾಸು ಸಹಾಯವನ್ನು ಕಳೆದುಕೊಳ್ಳಲು ಇಚ್ಚೆಯಿಲ್ಲ. ಈ ಕಾರಣಕ್ಕಾಗಿ ಆಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಲಾವತಿ ಸ್ಫರ್ಧಿಸದಿದ್ದರೆ, ಇತರ ಹಲವಾರು ರೈತ ವಿಧವೆಯರು ಚುನಾವಣೆಯಲ್ಲಿ ಸ್ಫರ್ಧಿಸಲು ಸಿದ್ಧರಿದ್ದಾರೆ" ಎಂದು ಹೇಳಿದ್ದಾರೆ.

ರಾಹುಲ್ ಭಾಷಣದ ಬಳಿಕ ಸುಲಭ್ ಇಂಟರ್‌ನ್ಯಾಶನಲ್ ಕಲಾವತಿಯವರ ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ರೂಪಾಯಿ ಠೇವಣಿ ಇರಿಸುವುದಾಗಿ ಹೇಳಿದೆ. ಸುಲಭ್ ಸಂಸ್ಥಾಪಕರಾಗಿರುವ ಬಿಂದೇಶ್ವರ್ ಪಾಠಕ್ ಅವರು ಸೋಮವಾರ ಕಲಾವತಿ ಅವರಿಗೆ, ರಾಜಕೀಯದಿಂದ ದೂರವಿದ್ದು, ಸಮಾಜ ಸೇವೆ ಮಾಡುವಂತೆ ಹೇಳಿದ್ದರು.

ಆದರೆ, ಕಲಾವತಿ ತನ್ನ ಸಲಹೆಯನ್ನು ಸ್ವೀಕರಿಸಿದರೂ, ತಿರಸ್ಕರಿಸಿದರೂ ತಾನು ಮಾತ್ರ ತನ್ನ ಭರವಸೆಗೆ ಬದ್ಧವಾಗಿರುವುದಾಗಿ ಪಾಠಕ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ