ಸ್ವೈನ್ ಫ್ಲೂ ಹೆಸರಿನಲ್ಲಿ ಕುಖ್ಯಾತವಾಗಿರುವ ಎಚ್1ಎನ್1 ಜ್ವರಕ್ಕೆ ಪ್ರತಿರೋಧಕವಾದ ಫ್ಲೂವಿರ್ (FLUVIR) ಎಂಬ ಔಷಧಿಯು ಕೊನೆಗೂ ಭಾರತೀಯ ಮುಕ್ತ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಮಂಗಳವಾರ ಮುಂಬೈಯಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ.
ಹೆಟಿರೋ ಹೆಲ್ತ್‌ಕೇರ್ ಲಿಮಿಟೆಡ್ ಎಂಬ ಭಾರತೀಯ ಔಷಧ ತಯಾರಿಕಾ ಸಂಸ್ಥೆಯು ಫ್ಲೂವಿರ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದು ಸದ್ಯಕ್ಕೆ ಲಭ್ಯವಿರುವ ಟಾಮಿಫ್ಲೂ ಎಂಬ ಔಷಧಿಗೆ ಸಮಾನವಾದ ಒಸೆಲ್ಟಾಮಿವಿರ್ ಎಂಬ ಔಷಧವನ್ನು ಒಳಗೊಂಡಿದೆ.
ಈಗಾಗಲೇ ದೇಶಾದ್ಯಂತ ಮಾರಕ ಎಚ್1ಎನ್1 ಜ್ವರಕ್ಕೆ ಬಲಿಯಾದವರ ಸಂಖ್ಯೆ 257ಕ್ಕೆ ಏರಿದ್ದು, 8,153 ಮಂದಿ ಬಾಧೆಗೀಡಾಗಿದ್ದಾರೆ. ಆಂಟಿ-ವೈರಲ್ ಔಷಧಿ ಒಸೆಲ್ಟಾಮಿವಿರ್‌ನ ಬಿಡಿ ಮಾರಾಟಕ್ಕೆ ಸರಕಾರ ಅಧಿಸೂಚನೆ ಹೊರಡಿಸುವ ಮೊದಲು, ಈ ಮಾರಣಾಂತಿಕ ಜ್ವರದ ನಿಯಂತ್ರಣಕ್ಕಾಗಿ ಕೇಂದ್ರವು 19 ದಶಲಕ್ಷ ಫ್ಲೂವಿರ್ ಕ್ಯಾಪ್ಸೂಲ್‌ಗಳನ್ನು ಹೆಟಿರೋ ಹೆಲ್ತ್‌ಕೇರ್‌ನಿಂದ ಪಡೆದುಕೊಂಡಿತ್ತು ಎಂದು ಕಂಪನಿಯ ಮಾರುಕಟ್ಟೆ ನಿರ್ದೇಶಕ ಹೆಟಿರೋ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಇದುವರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುತ್ತಿದ್ದ ಫ್ಲೂವಿರ್, ಇನ್ನು ಮುಂದೆ ದೇಶಾದ್ಯಂತ ಶೆಡ್ಯೂಲ್ x ಪರವಾನಗಿ ಇರುವ 480 ಔಷಧಿ ಮಳಿಗೆಗಳಲ್ಲಿ ಲಭ್ಯವಾಗಲಿದೆ.