ಇಶ್ರತ್ ಎನ್‌ಕೌಂಟರ್: ಅಫಿಡಾವಿಡ್ ಓಕೆ, ಈಗ ಬದಲಾವಣೆ ಯಾಕೆ?
ನವದೆಹಲಿ, ಬುಧವಾರ, 23 ಸೆಪ್ಟೆಂಬರ್ 2009( 15:08 IST )
ಇಶ್ರತ್ ಜೆಹಾನ್ ಎನ್‌ಕೌಂಟರ್ ಹತ್ಯೆ ಕುರಿತಂತೆ ಸಲ್ಲಿಸಿದ ಪ್ರಮಾಣಪತ್ರವನ್ನು ನವೀಕರಿಸುವುದಾಗಿ ಸರ್ಕಾರ ಬುಧವಾರ ತಿಳಿಸಿದೆ. ಅಫಿಡಾವಿಟ್ ಸಲ್ಲಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಮತ್ತು 2004ರಲ್ಲಿ ಇಶ್ರತ್ ಜಹಾನ್ ಸೇರಿದಂತೆ ನಾಲ್ಕು ಮಂದಿ ಶಂಕಿತ ಭಯೋತ್ಪಾದಕರ ಎನ್‌ಕೌಂಟರ್ ಹತ್ಯೆಯನ್ನು ಅಫಿಢಾವಿಟ್ ಆಧಾರದ ಮೇಲೆ ಮಾಡಲಾಯಿತೆಂದು ಸಮರ್ಥಿಕೊಳ್ಳುವಂತಿಲ್ಲವೆಂದು ಕೇಂದ್ರ ಸರ್ಕಾರ ಇದುವರೆಗೆ ಹೇಳುತ್ತಾ ಬಂದಿತ್ತು.
ನಾಲ್ವರು ದುರ್ದೈವಿಗಳು ಭಯೋತ್ಪಾದಕ ಸಖ್ಯ ಹೊಂದಿದ್ದಾರೆಂದು ರಾಜ್ಯಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಅಫಿಡಾವಿಟ್‌ನಲ್ಲಿ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಈಗ ಆ ಅಫಿಡಾವಿಟ್ ಬದಲಾವಣೆಗೆ ಯೋಜಿಸಿದೆ. ಸ್ವತಃ ಗೃಹಸಚಿವ ಪಿ.ಚಿದಂಬರಂ ಅಫಿಡಾವಿಟ್ ನವೀಕರಿಸುವ ಸುಳಿವು ನೀಡಿದ್ದಾರೆ. ಕಳೆದ ತಿಂಗಳು ಅಫಿಡಾವಿಡ್ ಸಲ್ಲಿಸಿದಾಗ ಅದನ್ನು ನೋಡುವ ಅವಕಾಶವಿದ್ದಿದ್ದರೆ ಅದರ ಸ್ವರೂಪವೇ ಬೇರೆಯಾಗುತ್ತಿತ್ತೆಂದು ಚಿದಂಬರಂ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಹೊಸ ಅಫಿಡಾವಿಟ್ ಸಲ್ಲಿಕೆಯ ಸಾಧ್ಯತೆಯ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಆದಾಗ್ಯೂ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಬೇಕಿದೆಯೆಂದು ನುಡಿದಿದ್ದಾರೆ.ಇಲ್ಲಿವರೆಗೆ ಭಯೋತ್ಪಾದನೆ ಸಖ್ಯಗಳ ಬಗ್ಗೆ ಮಾಹಿತಿಯು ಅವರನ್ನು ಕೊಲ್ಲುವುದಕ್ಕೆ ಪರವಾನಗಿಯಲ್ಲವೆಂದು ಗೃಹಸಚಿವಾಲಯವು ನಿಲುವು ಹೊಂದಿತ್ತು. ವಾಸ್ತವವಾಗಿ ರಾಜ್ಯಪೊಲೀಸರಿಗೆ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಯಾವುದೇ ಹಕ್ಕಿಲ್ಲವೆಂದು ಸಚಿವಾಲಯ ತಿಳಿಸಿತ್ತು.
ಮಂಗಳವಾರ ಚಿದಂಬರಂ ಇದೇ ಅಂಶವನ್ನು ಪುನರುಚ್ಚರಿಸಿದರೂ, ಅಫಿಡಾವಿಟ್ ಸಾರಾಂಶದಲ್ಲಿ ರಾಜ್ಯಪೊಲೀಸರಿಗೆ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಟ್ಟಿದೆಯೆಂದು ಚಿದಂಬರಂ ಒಪ್ಪಿಕೊಂಡಿದ್ದಾರೆ. ತಾವು ಅಫಿಡಾವಿಟ್ ಮುಂಚೆಯೇ ಗಮನಿಸಿದ್ದರೆ ರಾಜ್ಯಸರ್ಕಾರ ತನ್ನ ತಪ್ಪನ್ನು ಮುಚ್ಚಿಹಾಕಲು ಅಫಿಡಾವಿಟ್‌ನ್ನು ರಕ್ಷಾಕವಚವಾಗಿ ಬಳಸದಂತೆ ಖಾತರಿ ಮಾಡುತ್ತಿದ್ದುದಾಗಿ ಚಿದಂಬರಂ ತಿಳಿಸಿದ್ದಾರೆ.