ಉತ್ತರ ಪ್ರದೇಶದ ಪುರಾತನ ಹನುಮಂತ ದೇವಾಲಯಕ್ಕೆ ಪ್ರತಿದಿನ ಹಿಂದೂ-ಮುಸ್ಲಿಂ ಎಂಬ ಜಾತಿ ಭೇದವಿಲ್ಲದೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಇದೇನು ವಿಶೇಷ ಎಂದರೆ ಇಲ್ಲಿನ ಕೈಪಂಪ್‌ನಿಂದ ಹೊರಬರುವ ಅಲೌಕಿಕ ಶಕ್ತಿ ಹೊಂದಿರುವ ರೋಗನಿವಾರಕ ನೀರಿಗಾಗಿ.
ಈ ರೋಗನಿವಾರಕ ನೀರಿಗಾಗಿ ಪ್ರತಿದಿನ ಹಿಂದು-ಮುಸ್ಲಿಂ ಹಾಗೂ ಇನ್ನಿತರ ಜಾತಿಯ ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ದೃಶ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಲಕ್ನೋದಿಂದ ಸುಮಾರು 200ಕಿ.ಮೀ.ದೂರದಲ್ಲಿರುವ ಜಾಲೌನ್ ಜಿಲ್ಲೆಯ ಜಾಗ್ನೆವಾ ಗ್ರಾಮದ ಪುರಾತನ ಹನುಮಂತ ದೇವಾಲಯದ ಆವರಣದಲ್ಲಿ ಈ ಕೈಪಂಪ್ ಇದೆ. ಭಕ್ತರು ಪವಿತ್ರ ಜಲವನ್ನು ತೆಗೆದುಕೊಳ್ಳುವ ಮುನ್ನ ಕೈಪಂಪ್‌ಗೆ ಒಂದು ಸುತ್ತು (ಪರಿಕ್ರಮ) ಪ್ರದಕ್ಷಿಣೆ ಹಾಕಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಜಲೌನ್ ಹಾಗೂ ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಪ್ರತಿದಿನ ಸಾವಿರಾರು ಮಂದಿ ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಬಹುಕಾಲದಿಂದ ವಾಸಿಯಾಗದಿರುವ ಅಥವಾ ಮತ್ತೆ, ಮತ್ತೆ ಮರುಕಳಿಸುವ ರೋಗವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಈ ನೀರನ್ನು ಕುಡಿಯುತ್ತಿರುವುದಾಗಿ ಜಾಗ್ನೆವಾ ಗ್ರಾಮದ ಹಿರಿಯ ಚೋಟಿ ದುಲೈಯಾ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಮುಸ್ಲಿಂ ಮಹಿಳೆಯರು ಕೂಡ ಬುರ್ಖಾ ಧರಿಸಿ ಸಾಲಿನಲ್ಲಿ ನಿಂತು ಹ್ಯಾಂಡ್ ಪಂಪ್‌ಗೆ ಪ್ರದಕ್ಷಿಣೆ ಹಾಕಿ, ಪ್ರಾರ್ಥನೆ ಸಲ್ಲಿಸಿ ನೀರನ್ನು ತೆಗೆದುಕೊಳ್ಳುತ್ತಾರೆಂದು ವಿವರಿಸಿದ್ದಾರೆ. ಅಲ್ಲದೇ ತನ್ನ ಸಂಬಂಧಿಯೊಬ್ಬರು ಚರ್ಮ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಕೂಡ ಇಲ್ಲಿನ ಅಲೌಕಿಕ ಶಕ್ತಿಹೊಂದಿರುವ ನೀರನ್ನು ಸೇವಿಸಿದ ನಂತರ ಗುಣಮುಖ ಹೊಂದಿರುವುದಾಗಿಯೂ ತಿಳಿಸಿದ್ದ.
ಇತ್ತೀಚೆಗಷ್ಟೇ ಮಧ್ಯಪ್ರದೇಶದಿಂದ ಆಗಮಿಸಿದ್ದ ಸನ್ಯಾಸಿಯೊಬ್ಬರು ಭೇಟಿ ನೀಡಿ ಹೋದ ಮೇಲೆ ಈ ಕೈ ಪಂಪ್‌ನಲ್ಲಿನ ನೀರು ಪವಾಡಸದೃಶ ಎಂಬಂತೆ ರೋಗನಿವಾರಕ ಶಕ್ತಿಯನ್ನು ಪಡೆದುಕೊಳ್ಳುವ ಮೂಲಕ ಇದೀಗ 'ರೋಗ ಚಿಕಿತ್ಸಯ ಆಸ್ತಿಯಾಗಿ' ಪರಿವರ್ತನೆಗೊಂಡಿದೆ.
ಸುಮಾರು ಹತ್ತು ದಿನಗಳ ಹಿಂದಷ್ಟೇ ಗೀತಾ ನಂದಾಜೀ ಮಹಾರಾಜ್ ಎಂಬ ಸಾಧುವೊಬ್ಬರು ದೇವಾಲಯಕ್ಕೆ ಆಗಮಿಸಿದ್ದು, ಇಲ್ಲಿನ ಶೆಲ್ಟರ್‌ನಲ್ಲಿ ಆಶ್ರಯ ಪಡೆದಿದ್ದರು. ಬಳಿಕ ಇಲ್ಲಿನ ವಾತಾವರಣವೇ ಬದಲಾಯಿತು ಎಂಬುದು ಸ್ಥಳೀಯ ನಿವಾಸಿ ಸಂಜೀವ್ ಗುರ್ಜರ್ ಅಚ್ಚರಿಯ ನುಡಿ.
ಇಲ್ಲಿನ ಜನರಲ್ಲಿ ಬಹುತೇಕವಾಗಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಜನರ ಕಷ್ಟವನ್ನು ಅರಿತ ಸಾಧು ನಿಮ್ಮ ರೋಗ ಶಾಶ್ವತವಾಗಿ ಗುಣಹೊಂದುವ ವ್ಯವಸ್ಥೆ ಮಾಡುವುದಾಗಿ ಹೇಳಿ, ಹನುಮಂತ ದೇವಾಲಯದ ಮುಂಭಾಗದಲ್ಲಿರುವ ಹ್ಯಾಂಡ್ ಪಂಪ್‌ಗೆ ಕೆಲವು ಪೂಜಾ-ವಿಧಿಗಳನ್ನು ನೆರವೇರಿಸಿ, ನಿಮ್ಮ ಆರೋಗ್ಯದ ಎಲ್ಲಾ ಸಮಸ್ಯೆಗಳಿಗೂ ಈ ನೀರು ರಾಮಬಾಣವಾಗಲಿದೆ ಎಂದು ನುಡಿದಿರುವುದಾಗಿ ಮತ್ತೊಬ್ಬ ಸ್ಥಳೀಯ ನಿವಾಸಿ ದೀವೆಶ್ ಕಷ್ಯಪ್ ವಿವರಿಸಿದ್ದಾರೆ.
ಅದೇ ರೀತಿ ಕತೌಂಡಾ ಗ್ರಾಮದ ರಯೀಸ್ ಅಹ್ಮದ್ ಅವರ ಹತ್ತರ ಹರೆಯದ ಮಗಳಿಗೆ ಸರಿಯಾಗಿ ನಡೆಯಲು ಮತ್ತು ಊಟ ಮಾಡಲು ಆಗುತ್ತಿರಲಿಲ್ಲವಂತೆ, ಆದರೆ ಈ ಕೈಪಂಪ್ ನೀರನ್ನು ಸೇವಿಸಿದ ಬಳಿಕ ಗುಣಮುಖರಾಗಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.