ಗೋವಾ ಪ್ರವೇಶಕ್ಕೆ ನಿಷೇಧ ಹೇರಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ, ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಂಬೈಯಲ್ಲಿರುವ ಪಣಜಿ ನ್ಯಾಯಪೀಠದ ಮೊರೆ ಹೋಗಿದ್ದಾರೆ.
ಬುಧವಾರದಂದು ನ್ಯಾಯಾಲಯಕ್ಕೆ ಲಿಖಿತ ಅರ್ಜಿಯನ್ನು ಸಲ್ಲಿಸಿ, ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಅಪರಾಧ ನೀತಿ ಸಂಹಿತೆಯಂತೆ ಸೆಕ್ಷನ್ 144ರ ಅನ್ವಯ, ಗೋವಾ ಪ್ರವೇಶಕ್ಕೆ ನಿಷೇಧ ಹೇರಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಪ್ರವೇಶ ನಿಷೇಧ ಜಾರಿಗೊಳಿಸುವ ಮುನ್ನ ಅಧಿಕಾರಿಗಳು ತಮ್ಮೊಂದಿಗೆ ಕನಿಷ್ಟ ಚರ್ಚೆ ಕೂಡಾ ನಡೆಸಿಲ್ಲ ಎಂದು ದೂರಿದ್ದಾರೆ.
ಮುತಾಲಿಕ್ ಅರ್ಜಿ ಮಾಸಾಂತ್ಯದ ವೇಳೆಗೆ ವಿಚಾರಣೆಗೆ ಬರುವ ನಿರೀಕ್ಷೆಯಿದ್ದು, ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ರದ್ದುಗೊಳಿಸಬೇಕು ಹಾಗೂ ಜಿಲ್ಲಾಧಿಕಾರಿಗಳಾದ ಮಿಹಿರ್ ವರ್ಧನ್ (ಉತ್ತರ ಗೋವಾ ) ಮತ್ತು ಜಿಪಿ ನಾಯಕ್ (ದಕ್ಷಿಣ ಗೋವಾ ) ಅವರನ್ನು ವಿಚಾರಣೆಯಲ್ಲಿ ಪ್ರತಿವಾದಿಗಳನ್ನಾಗಿಸಬೇಕು ಎಂದು ನ್ಯಾಯಾಲಯಕ್ಕೆ ಮುತಾಲಿಕ್ ಮನವಿ ಮಾಡಿದ್ದಾರೆ.
ಹಿಂದೂತ್ವವಾದಿ ಸಂಘಟನೆಗಳ ಶಾಖೆಯನ್ನು ಆರಂಭಿಸಲು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೋವಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ವರದಿಗಳ ಹಿನ್ನಲೆಯಲ್ಲಿ ಗೋವಾ ಸರಕಾರ ಮುತಾಲಿಕ್ ಪ್ರವೇಶಕ್ಕೆ ನಿಷೇಧ ಹೇರಿತ್ತು.
ಮಂಗಳೂರಿನಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ಪಬ್ ಮೇಲೆ ದಾಳಿ ಮಾಡಿ, ಯುವತಿಯರನ್ನು ಅಮಾನುಷವಾಗಿ ಚಚ್ಚಿದ ಘಟನೆಯ ನಂತರ ದಾಳಿಯನ್ನು ಸಮರ್ಥಿಸಿಕೊಂಡು, ಪ್ರವಾಸಿ ರಾಜ್ಯದಲ್ಲಿ ಪಬ್ ಸಂಸ್ಕ್ರತಿಯನ್ನು ಬೆಳೆಯಲು ಬಿಡುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಘರ್ಜಿಸಿದ್ದರು