'ಅಣ್ವಸ್ತ್ರ ಪರೀಕ್ಷೆಯಿಂದ 200 ಕಿ.ಟನ್ ಪ್ರತಿರೋಧಕ ಶಕ್ತಿ'
1998ರಲ್ಲಿ ಜಲಜನಕ ಬಾಂಬ್ ಪರೀಕ್ಷೆಯ ಪರಿಣಾಮಕಾರತ್ವದ ಬಗ್ಗೆ ಮೂಡಿದ ಅನುಮಾನಗಳನ್ನು ಅಣುಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ತಳ್ಳಿಹಾಕಿದ್ದಾರೆ. ವಿಜ್ಞಾನಿಗಳು 200 ಕಿಲೋಟನ್ ಸಾಮರ್ಥ್ಯದ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಕಾಕೋಡ್ಕರ್ ತಿಳಿಸಿದ್ದಾರೆ.
1998ರ ಅಣ್ವಸ್ತ್ರ ಪರೀಕ್ಷೆಗಳು ಸಂಪೂರ್ಣ ಯಶಸ್ವಿಯೆಂದು ಪುನರುಚ್ಚರಿಸಲು ತಾವು ಬಯಸುವುದಾಗಿಯೂ, ಸಂಪೂರ್ಣವಾಗಿ ಎಲ್ಲ ಉದ್ದೇಶಗಳನ್ನು ಸಾಧಿಸಿದ್ದಾಗಿ ಅವರು ಹೇಳಿದರು. ವಿದಳನ ಮತ್ತು ಥರ್ಮೋನ್ಯೂಕ್ಲಿಯರ್ ಶಸ್ತ್ರಾಸ್ತ್ರ ವ್ಯವಸ್ಥೆ ಎರಡರಲ್ಲೂ 200 ಕಿಲೋಟನ್‌ವರೆಗೆ ಪ್ರತಿರೋಧಕ ಶಕ್ತಿ ನಿರ್ಮಾಣದ ಸಾಮರ್ಥ್ಯವನ್ನು ಇದು ಗಳಿಸಿಕೊಟ್ಟಿದೆಯೆಂದು ಅವರು ಪತ್ರಿಕಾಗೋಷ್ಟಿ ಉದ್ದೇಶಿಸಿ ಹೇಳಿದರು.
ಬಾಬಾ ಅಣುಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದ ಕಾಕೋಡ್ಕರ್, ಪೋಖ್ರಾನ್-2 ಅಣ್ವಸ್ತ್ರ ಪರೀಕ್ಷೆಗಳಿಂದ ಉದ್ಭವಿಸಿದ ವಿವಾದ ಅನಗತ್ಯವೆಂದು ತೀರ್ಮಾನಿಸಿದರು. ಡಿಆರ್‌ಡಿಒ ಮಾಜಿ ವಿಜ್ಞಾನಿಯೊಬ್ಬರು ಹೈಡ್ರೋಜನ್ ಬಾಂಬ್ ಪ್ರಯೋಗವು ವಿಫಲಗೊಂಡಿತ್ತೆಂದು ಹೇಳಿ ವಿವಾದ ಕಿಡಿ ಸ್ಫೋಟಿಸಿದ್ದರಿಂದ ಕಾಕೋಡ್ಕರ್ ಹೇಳಿಕೆ ಹೊರಬಿದ್ದಿದೆ.