ನವದೆಹಲಿ, ಶುಕ್ರವಾರ, 25 ಸೆಪ್ಟೆಂಬರ್ 2009( 13:44 IST )
PR
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಾಗಿ ಬಡ್ತಿಗೆ ಶಿಫಾರಸಾಗಿರುವ ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಮೇಲಿನ ಅಕ್ರಮ ಆಸ್ತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಪ್ರಕರಣವೀಗ ಜಾತಿ ವಿವಾದದ ಸುಳಿಯಲ್ಲಿ ಸಿಲುಕಿದೆ.
ದಲಿತರಾಗಿರುವ ದಿನಕರನ್ ಹೆಸರಿಗೆ ಮಸಿ ಬಳಿಯಲು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮ ಆಸ್ತಿಯನ್ನು ಮುಂದಿಟ್ಟು ವಿವಾದ ಸೃಷ್ಟಿಸಿರುವುದಾಗಿ ಬೂಟಾ ಸಿಂಗ್ ನೇತೃತ್ವದ ಎಸ್‌ಟಿ ರಾಷ್ಟ್ರೀಯ ಆಯೋಗ ಗುರುವಾರ ಆರೋಪಿಸಿದ್ದು, ಸರ್ಕಾರ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದೆ.
ಈ ಕುರಿತು ಆಯೋಗವು ಪ್ರಕಟಣೆ ಹೊರಡಿಸಿದ್ದು, ದಿನಕರನ್ ಹೆಸರು ಕೆಡಿಸಲು ಕುತಂತ್ರ ನಡೆಯುತ್ತಿದೆ. ದಲಿತ ವಿರೋಧಿಗಳು ಮತ್ತು ಕೆಲ ಮತೀಯ ಶಕ್ತಿಗಳು ಈ ಷಡ್ಯಂತ್ರದ ಹಿಂದಿವೆ ಎಂದು ಗಂಭೀರವಾಗಿ ಆಪಾದಿಸಿದೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿ ಮಂಡಳಿಯೇ ದಿನಕರನ್ ಬಡ್ತಿಗೆ ಶಿಫಾರಸು ಮಾಡಿದೆ. ಹಾಗಿದ್ದರೂ ಈ ವಿವಾದ ಏಕೆ ಸೃಷ್ಟಿಯಾಗಿದೆ? ಇಷ್ಟೆಲ್ಲಾ ಆದರೂ ಸರ್ಕಾರ ಪರಿಶಿಷ್ಟ ಜಾತಿಯವರ ಸಾಂವಿಧಾನಿಕ ಹಕ್ಕನ್ನು ಏಕೆ ರಕ್ಷಿಸುತ್ತಿಲ್ಲ ಎಂದು ಅದು ತರಾಟೆಗೆ ತೆಗೆದುಕೊಂಡಿದೆ.
ದಿನಕರನ್ ಮೇಲಿನ ಆರೋಪ: ದಿನಕರನ್ ಹಾಗೂ ಅವರ ಕುಟುಂಬ 700ಎಕರೆಯಷ್ಟು ಜಮೀನು ಖರೀದಿಸಿದೆ. ಅದರಲ್ಲಿ ಎಸ್ಟೇಟ್ ಕೂಡ ಮಾಡಿಕೊಂಡಿದ್ದಾರೆ. ಒಂದು ರಸ್ತೆಗೆ ದಿನಕರನ್ ಹೆಸರು ಇಡಲಾಗಿದೆ. ಪತ್ನಿ, ಪುತ್ರಿ ಹೆಸರಲ್ಲೂ ಭೂಮಿ ಖರೀದಿಸಿದ್ದಾರೆ. ಒಂದು ಗಂಟೆ ಅವಧಿಯಲ್ಲಿ 500ಜನಕ್ಕೆ ಜಾಮೀನು ನೀಡಿದ್ದಾರೆ. ಬಿನ್ನಿ ಕಾಟನ್ ಮಿಲ್ ಪ್ರಕರಣದಲ್ಲಿ ಸರ್ಕಾರಿ ವಕೀಲರ ಹೇಳಿಕೆ ಆಧರಿಸಿ 50ಕೋಟಿ ರೂಪಾಯಿ ರಿಯಾಯಿತಿ ನೀಡಿದ್ದಾರೆ ಎಂಬ ಗಂಭೀರ ಆರೋಪಗಳಿವೆ.
ದಿನಕರನ್ ಅವರು ತಮಿಳುನಾಡಿನ ಭೂ ಸುಧಾರಣಾ ಕಾಯ್ದೆಯನ್ನೂ ಉಲ್ಲಂಘಿಸಿ ಅಪಾರ ಪ್ರಮಾಣದ ಜಮೀನು ಸೇರಿದಂತೆ ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ. ಅವರ ವಿರುದ್ಧ ಹಲವು ಅವ್ಯವಹಾರದ ಆರೋಪಗಳು ಇವೆ ಎಂದು ಚೆನ್ನೈ ಮೂಲದ ಹಲವು ವಕೀಲರು ನ್ಯಾಯಾಂಗದ ಹೊಣೆಗಾರಿಕೆ ಎಂಬ ಹೆಸರಿನಡಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿಗೆ ಪತ್ರ ಬರೆದಿದ್ದರು. ಅವ್ಯವಹಾರದಲ್ಲಿ ಭಾಗಿಯಾಗಿರುವ ದಿನಕರನ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಬಾರದು ಎಂದು ಒತ್ತಾಯಿಸಿತ್ತು. ಆ ನಿಟ್ಟಿನಲ್ಲಿ ಆಸ್ತಿವಿವಾದದಲ್ಲಿ ತೊಡಗಿದ ಆರೋಪ ಎದುರಿಸುತ್ತಿರುವ ಪ್ರಥಮ ಮುಖ್ಯನ್ಯಾಯಧೀಶರು ಎಂಬ ಕಳಂಕಕ್ಕೆ ದಿನಕರನ್ ಗುರಿಯಾಗಿದ್ದಾರೆ.