ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಂದ್ರನ ಒಂದು ಟನ್ ಮಣ್ಣಿನಿಂದ ಅರ್ಧ ಲೀ. ನೀರು (Chandrayaan | ISRO | Water in Moon | Madhavan Nair)
 
ಚಂದ್ರನಲ್ಲಿ ನೀರಿನ ಇರುವಿಕೆಯನ್ನು ಖಚಿತಪಡಿಸುವ ಮೂಲಕ ಭಾರತವು ಐತಿಹಾಸಿಕ ಸಾಧನೆ ಮಾಡಿದೆ ಎಂದು ತಿಳಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, 'ಚಂದ್ರಯಾನ' ಗಗನ ಯಾತ್ರೆಯು ಅದ್ಭುತ ಯಶಸ್ಸು ನೀಡಿದೆ, ಅಲ್ಲಿರುವ ನೀರಿನ ಅಂಶವೆಂದರೆ, ಒಂದು ಟನ್ ಮಣ್ಣಿನಿಂದ ಅರ್ಧ ಲೀಟರ್ ನೀರು ಹೊರತೆಗೆಯಬಹುದು ಎಂದು ಹೇಳಿದೆ.

ಈ ಮೊದಲು ಚಂದ್ರಯಾನ ಶೇ.95 ಯಶಸ್ಸು ಗಳಿಸಿದೆ ಎಂದು ಹೇಳಲಾಗುತ್ತಿದ್ದರೆ, ಇದೀಗ ಅದು ಶೇ.110 ಯಶಸ್ಸು ಸಾಧಿಸಿದೆ ಎಂದು ಹೇಳಿಕೊಳ್ಳಬಹುದೆಂದು ಆತ್ಮವಿಶ್ವಾಸದಿಂದ ಎಂದೂ ಇಸ್ರೋ ನುಡಿದಿದೆ.

ವಿಶ್ವಾದ್ಯಂತ ಜನರು ಚಂದ್ರಯಾನದ ಯಶಸ್ಸನ್ನು ಕೊಂಡಾಡುತ್ತಿದ್ದಾರೆ. ಚಂದ್ರಯಾನದ ಗುರಿ ಸಾಧಿಸಿದ್ದೇವೆ ಎಂದು ತಿಳಿಸಿದ ಇಸ್ರೋ ಮುಖ್ಯಸ್ಥ ಮಾಧವನ್ ನಾಯರ್, ಚಂದ್ರಯಾನವು ಒಪ್ಪಿಸಿದ ಮಾಹಿತಿಗಳು ಅಪಾರ ಪ್ರಮಾಣದ್ದು. ಅವೆಲ್ಲವನ್ನೂ ಪರಿಷ್ಕರಿಸಿ, ವಿಶ್ಲೇಷಿಸಿ ಅರ್ಥೈಸಿಕೊಳ್ಳಲು ಆರು ತಿಂಗಳಿಂದ ಮೂರು ವರ್ಷಗಳು ಬೇಕಾಗಬಹುದು ಎಂದಿದ್ದಾರೆ.

ಚಂದ್ರಯಾನದಲ್ಲಿ ಪತ್ತೆಯಾಗಿರುವ ಅಂಶಗಳ, ವಿಶೇಷವಾಗಿ ಚಂದ್ರನ ಮೇಲ್ಮೈಯಲ್ಲಿನ ನೀರಿನ ಅಂಶದ ಬಗ್ಗೆ ಅವರು ವಿವರಣೆ ನೀಡಿದರು. ಚಂದ್ರನ ಧ್ರುವೀಯ ಪ್ರದೇಶಗಳಲ್ಲಿ ನೀರು (H2O) ಮತ್ತು ಹೈಡ್ರಾಕ್ಸಿಲ್ (HO) ಕಣಗಳು ಹೆಚ್ಚು ಕಂಡುಬಂದಿದೆ. ಅಲ್ಲಿರುವ ನೀರು ಕೊಳ ಅಥವಾ ಸಾಗರದ ರೂಪದಲ್ಲಿಲ್ಲ, ಅಥವಾ ನೀರಿನ ಹನಿಯ ರೂಪದಲ್ಲಿಯೂ ಇಲ್ಲ. ಅದು ಅಲ್ಲಿರುವ ಖನಿಜಗಳ ಮೇಲ್ಮೈಯಲ್ಲಿ ಬೆರೆತುಕೊಂಡಿದೆ. ಆದರೆ ಅಲ್ಲಿ ದೊರೆತಿರುವ ಜಲಾಂಶದ ಗುಣಮಟ್ಟವು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು. ಹೌದು, ಅಲ್ಲಿಂದ ಶುದ್ಧ ನೀರು ಹೊರಗೆಳೆಯಬಹುದು. ಆದರೆ ಪ್ರಮಾಣ ಮಾತ್ರ ತೀರಾ ಕಡಿಮೆ. ಅಂದರೆ ಚಂದ್ರನ ಮೇಲ್ಮೈಯ ಒಂದು ಟನ್ ಮಣ್ಣಿನಿಂದ ಸುಮಾರು ಅರ್ಧ ಲೀಟರ್ ನೀರು ದೊರೆಯಬಹುದು ಎಂದು ತಿಳಿಸಿದರು ನಾಯರ್.

ಚಂದ್ರನಲ್ಲಿ ನೀರು ಹೇಗಿರುತ್ತದೆ ಎಂಬ ಬಗ್ಗೆ ನಮಗಿನ್ನೂ ಅಚ್ಚರಿಯಿದೆ. ಆದರೆ ಆರಂಭಿಕ ವಿಶ್ಲೇಷಣೆಯ ಪ್ರಕಾರ, ಸೌರ ಗಾಳಿ ಮತ್ತು ಪತನಗೊಳ್ಳುವ ಉಲ್ಕೆ ಅಥವಾ ಇತರ ಆಕಾಶಕಾಯಗಳಿಂದಾಗಿ ನೀರು ಇಲ್ಲಿರಬಹುದಾದ ಸಾಧ್ಯತೆಯೂ ಇದೆ ಎಂದರು.

ಸೌರ ಗಾಳಿಯು ಜಲಜನಕ (H) ಉತ್ಪತ್ತಿ ಮಾಡುತ್ತವೆ ಮತ್ತು ಕೆಲವು ವೇಗದ ಮಟ್ಟದಲ್ಲಿ ಅವುಗಳು ಅಲ್ಲಿರುವ ಖನಿಜಾಂಶಗಳಲ್ಲಿರುವ ಆಮ್ಲಜನಕ (O)ದೊಂದಿಗೆ ಸೇರಿಕೊಂಡು ನೀರು (HOO) ಮಚ್ಚು ಹೈಡ್ರಾಕ್ಸಿಲ್ (HO) ಉತ್ಪತ್ತಿಗೆ ಕಾರಣವಾಗುತ್ತವೆ ಎಂದ ಅವರು, ಅಲ್ಲಿ ನೀರಿನ ಕಣಗಳಿದ್ದರೂ, ಅಲ್ಲಿ ಜೀವ ಜಾಲ ಇದೆ ಎಂಬುದು ಇದರರ್ಥವಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ