ನವದೆಹಲಿ, ಶುಕ್ರವಾರ, 25 ಸೆಪ್ಟೆಂಬರ್ 2009( 17:24 IST )
ಜಾರಿ ನಿರ್ದೇಶನಾಲಯವು ದೆಹಲಿಯ ಸುತ್ತಮುತ್ತ 8 ಸ್ಥಳಗಳ ಮೇಲೆ ದಾಳಿ ಮಾಡಿ, ವಿಶ್ವದ ದೊಡ್ಡ ಹವಾಲಾ ಹಣ ಅವ್ಯವಹಾರದ ಜಾಲವನ್ನು ಪತ್ತೆಹಚ್ಚಿದೆ. ಇಡೀ ಜಾಲದ ಹಿಂದಿನ ಸೂತ್ರಧಾರಿಯನ್ನು ನರೇಶ್ ಜೈನ್ ಎಂದು ಗುರುತಿಸಲಾಗಿದ್ದು, ದೆಹಲಿಯಲ್ಲಿರುವ ಅವನ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ನರೇಶ್ ಜೈನ್‌ನ ಹವಾಲ ಜಾಲವು ಸಾವಿರಾರು ಕೋಟಿಗಳ ವ್ಯವಹಾರವಾಗಿದ್ದು, ಯುಎಇ, ಚೀನಾ, ನೈಜೀರಿಯ, ಪಾಕಿಸ್ತಾನ, ಆಫ್ಘಾನಿಸ್ತಾನ, ಇಟಲಿ ಮತ್ತು ಬೊಲಿವಿಯ ಸೇರಿದಂತೆ ಭಾರತ ಮತ್ತು ಅನೇಕ ದೇಶಗಳಲ್ಲಿ ಹರಡಿಕೊಂಡಿತ್ತು. ಅನಿವಾಸಿ ಭಾರತೀಯನಾದ ಜೈನ್ ವಿಶ್ವದ ವಿವಾದಾತೀತ ಹವಾಲ ದೊರೆಯೆಂದು ಪರಿಗಣಿಸಲಾಗಿದ್ದು, ಅವನ ಹವಾಲ ವಹಿವಾಟು 5000 ಕೋಟಿ ರೂ. ಇತ್ತೆಂದು ಅಂದಾಜು ಮಾಡಲಾಗಿದೆ.
ಮೂಲಗಳ ಪ್ರಕಾರ, ಏಜೆನ್ಸಿಯು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಪ್ರಕರಣವನ್ನು ನರೇಶ್ ಜೈನ್ ವಿರುದ್ಧ ದಾಖಲು ಮಾಡಿದೆ. ಆದರೆ ಕಾಯ್ದೆಯಡಿ ಅವನ ಬಂಧನಕ್ಕೆ ಅವಕಾಶವಿಲ್ಲವೆಂದು ಹೇಳಲಾಗಿದೆ. ಜೈನ್ ಮನೆ ಮೇಲೆ ನಡೆದ ದಾಳಿಯಲ್ಲಿ 60 ಲಕ್ಷ ರೂ. ಭಾರತದ ಕರೆನ್ಸಿ, 30 ಲಕ್ಷ ರೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ.ಕರೆನ್ಸಿಗಳಲ್ಲದೇ ಕೆಲವು ಆಕ್ಷೇಪಾರ್ಹ ದಾಖಲೆಗಳು ದಾಳಿಯಲ್ಲಿ ಪತ್ತೆಯಾಗಿದೆ.
ಮೂಲಗಳು ಪ್ರಕಾರ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಕೆಲವು ಅಕ್ರಮ ವಹಿವಾಟುಗಳ ವಿವರಗಳು ಈ ದಾಖಲೆಗಳಲ್ಲಿದೆ. ತನಿಖಾ ದಳಗಳು ದಾವೂದ್ ಇಬ್ರಾಹಿಂನ ಡಿ-ಕಂಪೆನಿ ಮತ್ತು ಮಾದಕವಸ್ತು ಮಾಫಿಯ ಜತೆ ಅವನ ಸಖ್ಯವನ್ನು ತನಿಖೆ ಮಾಡುತ್ತಿವೆ.
ಇದಕ್ಕೆ ಮುಂಚೆ ದುಬೈನಲ್ಲಿ ನೆಲೆ ಹೊಂದಿದ್ದ ಜೈನ್, ತನ್ನ ನೆಲೆಯನ್ನು 6 ತಿಂಗಳ ಕೆಳಗೆ ಭಾರತಕ್ಕೆ ಸ್ಥಳಾಂತರಿಸಿದ್ದ. ದುಬೈನಲ್ಲಿ ಕೂಡ ಇವೇ ಆರೋಪಗಳ ಮೇಲೆ ಅವನನ್ನು ತನಿಖೆಗೆ ಒಳಪಡಿಸಲಾಗಿತ್ತು. ಅಲ್ ಖಾಯಿದಾ ಭಯೋತ್ಪಾದಕ ಜಾಲಕ್ಕೆ ಕೂಡ ಜೈನ್ ಹಣ ಕಳಿಸುತ್ತಿದ್ದನೆಂದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ.