ಗೋವಾದ ಬಿಜೆಪಿ ಹಿರಿಯ ನಾಯಕ ಮನೋಹರ್ ಪಾರಿಕ್ಕರ್ ಅವರು ಹಿರಿಯ ಮುಖಂಡ ಅಡ್ವಾಣಿಗೆ ಹಳಸಿದ ಉಪ್ಪಿನಕಾಯಿ ಎಂದು ಜರಿದು ವಿವಾದಕ್ಕೆ ಗುರಿಯಾಗಿದ್ದರೂ, ರಾಜನಾಥ್ ಬದಲಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಅವರನ್ನೇ ಹುರಿಯಾಳಾಗಿ ಬಿಜೆಪಿ ಗೋವಾ ಘಟಕ ಮಾಡಿದೆ. ಈ ಕುರಿತು ಪಕ್ಷದ ಗೋವಾ ವಕ್ತಾರ ಗೋವಿಂದ್ ಪರ್ವಟ್ಕರ್, ಪರಿಕ್ಕರ್ ಹೇಳಿಕೆಯನ್ನು ಮಾಧ್ಯಮ ಅತಿರಂಜಿತವಾಗಿ ಬರೆದಿವೆಯೆಂದು ಟೀಕಿಸಿದರು.
ಪಕ್ಷದ ಮುಖ್ಯಕಚೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಪರ್ವಟ್ಕರ್, ಈ ವಿವಾದದಿಂದ ಪಕ್ಷದ ಅಧ್ಯಕ್ಷರಾಗಿ ಪರಿಕ್ಕರ್ ಭವಿಷ್ಯಕ್ಕೆ ಪೆಟ್ಟಾಗುವುದಿಲ್ಲವೆಂದು ಹೇಳಿದರು. ಮಾದ್ಯಮ ಈ ವಿವಾದ ಸೃಷ್ಟಿಸಿದೆಯೆಂದು ನಮ್ಮ ನಾಯಕತ್ವ ಅರ್ಥಮಾಡಿಕೊಂಡಿದೆ ಎಂದು ಪರ್ವಟ್ಕರ್ ತಿಳಿಸಿದರು.ಮಾಧ್ಯಮವು ಪರಿಕ್ಕರ್‌ನ ಕೆಲವು ಪ್ರತಿಕ್ರಿಯೆಗಳನ್ನು ಮಾತ್ರ ಹೆಕ್ಕಿಕೊಂಡು ಬಿಜೆಪಿ ಪ್ರಮುಖರಾದ ವಾಜಪೇಯಿ ಮತ್ತು ಅಡ್ವಾಣಿಗೆ ಅವರ ಹೊಗಳಿಕೆಗಳನ್ನು ಕಡೆಗಣಿಸಿದ್ದಾಗಿ ಅವರು ಹೇಳಿದ್ದಾರೆ.
'ಉಪ್ಪಿನಕಾಯಿ ಒಂದು ವರ್ಷದವರೆಗೆ ಪಕ್ವವಾಗಲು ಬಿಟ್ಟರೆ ಅದರ ರುಚಿ ಸೊಗಸಾಗಿರುತ್ತದೆ. ಆದರೆ 2 ವರ್ಷಕ್ಕಿಂತ ಹೆಚ್ಚು ಸಮಯವಿಟ್ಟರೆ ಅದು ಹಳಸುತ್ತದೆ. ಆಡ್ವಾಣಿ ಅವಧಿ ಹೆಚ್ಚು ಕಡಿಮೆ ಮುಗಿದಿದೆ. ಅವರು ಪಕ್ಷದ ಸದಸ್ಯರಿಗೆ ಮಾರ್ಗದರ್ಶಕರಾಗಿ ಅಥವಾ ಗುರುವಾಗಿರಬೇಕು' ಎಂದು ಪರಿಕ್ಕರ್ ಸೋಮವಾರ ಹೇಳುವ ಮೂಲದ ವಿವಾದದ ಕಿಡಿ ಸ್ಪೋಟಿಸಿದ್ದರು.