ಸೋಮನಾಥ, ಜೂನಾಗಢ, ಶುಕ್ರವಾರ, 25 ಸೆಪ್ಟೆಂಬರ್ 2009( 20:06 IST )
PTI
ರಾಮಮಂದಿರ ವಿಷಯವು ಮತದಾರರ ಮೇಲೆ ಯಾವುದೇ ಪ್ರಭಾವ ಬೀರಲು ವಿಫಲವಾಗಿದ್ದರೂ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ತಾನು ಬದ್ಧವಾಗಿರುವುದಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ.
ನನ್ನ ರಥಯಾತ್ರೆಯ 20ನೇ ವರ್ಷಾಚರಣೆ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲೆಂದು ನಾನಿಂದು ಸೋಮನಾಥಕ್ಕೆ ಬಂದಿದ್ದೇನೆ. ರಾಮ ಮಂದಿರವು ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕು ಮತ್ತು ನಿರ್ಮಾಣವಾಗಲಿದೆ ಎಂದು ಆಡ್ವಾಣಿ ಅವರು ದೇವರಿಗೆ ಪ್ರಾರ್ಥನೆ ನೆರವೇರಿಸಿದ ಬಳಿಕ ನುಡಿದರು.
1990ರ ಸೆಪ್ಟೆಂಬರ್ 25ರಂದು ಆಡ್ವಾಣಿ ಅವರು ಇದೇ ಸ್ಥಳದಿಂದ ತಮ್ಮ ಶ್ರೀರಾಮ ರಥ ಯಾತ್ರೆಯನ್ನು ಆರಂಭಿಸಿದ್ದರು. ಬಿಹಾರದಲ್ಲಿ ಅವರ ಬಂಧನವಾದ ಸಂದರ್ಭದಲ್ಲಿ ರಥ ಯಾತ್ರೆ ಅರ್ಧಕ್ಕೇ ಸ್ಥಗಿತವಾಗಿತ್ತಾದರೂ ಅದು ಬಿಜೆಪಿಯನ್ನು ಅಧಿಕಾರದ ಬಾಗಿಲಲ್ಲಿ ತಂದು ನಿಲ್ಲಿಸಲು ಭದ್ರ ಅಡಿಪಾಯ ಹಾಕಿಕೊಟ್ಟಿತ್ತು.
ಪ್ರತಿ ವರ್ಷ ಇದೇ ದಿನದಂದು ನಾನು ಸೋಮನಾಥ ಸಂದರ್ಶಿಸುತ್ತೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ಏಳುವ ವರೆಗೂ ಇದು ಮುಂದುವರಿಯುತ್ತದೆ ಎಂದು ಆಡ್ವಾಣಿ ನುಡಿದರು. ಅವರ ಜೊತೆಗೆ ಪುತ್ರಿ ಪ್ರತಿಭಾ ಆಡ್ವಾಣಿ ಕೂಡ ಇದ್ದರು.