ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿದೇಶಾಂಗ ಸಚಿವರಾದ ಎಸ್.ಎಂ. ಕೃಷ್ಣ ಹಾಗೂ ಶಶಿ ತರೂರ್ ಅವರುಗಳು ಮೂರು ತಿಂಗಳ ಕಾಲ ಪಂಚತಾರಾ ಹೋಟೆಲ್‌ಗಳಲ್ಲಿ ತಂಗಿದ್ದ ವಾಸ್ತವ್ಯದ ಖರ್ಚುವೆಚ್ಚಗಳನ್ನು ಭರಿಸಿದ್ದು ಯಾರು ಎಂಬ ಸಂಗತಿಯನ್ನು ಬಹಿರಂಗಪಡಿಸುವಂತೆ ಬಿಜೆಪಿ ಆಗ್ರಹಿಸಿದೆ. ಈ ವೆಚ್ಚಗಳನ್ನು ಭರಿಸುವಂತೆ ವಿದೇಶಾಂಗ ಸಚಿವಾಲಯ ಸರ್ಕಾರವನ್ನು ಕೋರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ಈ ಒತ್ತಾಯ ಮಂಡಿಸಿದೆ.
ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಶಶಿ ತರೂರ್ ಅವರು ತಂಗಿದ್ದ ಪಂಚತಾರಾ ಹೋಟೆಲ್‌ಗಳ ಖರ್ಚನ್ನು ಕೇಂದ್ರ ಲೋಕೋಪಯೋಗಿ ಇಲಾಖೆಯೇ ಭರಿಸಿದೆ ಎಂಬ ಸಂಗತಿಯನ್ನು ಇಂಗ್ಲಿಷ್ ದೈನಿಕವೊಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ವಾಸ್ತವ ಏನೆಂಬುದನ್ನು ಬಹಿರಂಗಪಡಿಸಬೇಕು ಎಂಬುದಾಗಿ ಬಿಜೆಪಿಯ ವಕ್ತಾರ ರವಿಶಂಕರ್ ಪ್ರಸಾದ್ ಶುಕ್ರವಾರ ಒತ್ತಾಯಿಸಿದ್ದಾರೆ.
"ತಾವು ಪಂಚಾತಾರಾ ಹೋಟೆಲ್ಗಳಲ್ಲಿ ತಂಗಲು ಖಾಸಗಿ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಈ ಸಚಿವರು ಹೇಳಿಕೆ ನೀಡಿದ್ದರು. ಆದರೆ ಇವರು ಈಗ ಸುಳ್ಳು ಹೇಳಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇವರು ಸಾರ್ವಜನಿಕ ಹೊಣೆಗಾರಿಕೆ ಮರೆತು ಜನರ ದಿಕ್ಕು ತಪ್ಪಿಸಿದ್ದು ಸರಿಯೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಈ ಇಬ್ಬರು ಸಂಪುಟ ಸೇರಿದ ನಂತರ ಇವರಿಬ್ಬರೂ ಪ್ರತ್ಯೇಕವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ತಂಗಿದ್ದರು. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಿತವ್ಯಯವನ್ನು ಸಚಿವರು ತಮ್ಮ ಖಾಸಿಗಿ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು ಎಂಬುದಾಗಿ ಹೇಳಿದ ಬಳಿಕ ಈ ಹೋಟೆಲ್‌ಗಳ ಕೊಠಡಿಗಳನ್ನು ತೆರವುಗೊಳಿಸಿದ್ದಾರೆ.