ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಬೆದರಿಕೆ ಹಾಕುವ ಪತ್ರಗಳನ್ನು ಬರೆದಿದ್ದ ವ್ಯಕ್ತಿಯೊಬ್ಬನನ್ನು ಜಾರ್ಖಂಡ್‌ನ ಹಳ್ಳಿಯೊಂದರಿಂದ ಪೊಲೀಸರು ಬಂಧಿಸಿದ್ದಾರೆ.
ಲಟೇಹರ್ ಜಿಲ್ಲೆಯ ನಾರಾಯಣಪುರ ಹಳ್ಳಿಯಿಂದ ಧನಂಜಯ್ ಕುಮಾರ್ ಮೆಹ್ತಾ ಎಂಬಾತನನ್ನು ಶುಕ್ರವಾರ ಬಂಧಿಸಿದ್ದು ಆತನಿಂದ ಒಂದು ಪಿಸ್ತೂಲ್ ಹಾಗೂ ಕೆಲವು ಮದ್ದುಗುಂಡುಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
"ಕಳೆದ ಜುಲೈ ತಿಂಗಳಲ್ಲಿ ಈತ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಹಾಗೂ ಚಿದಂಬರಂ ಅವರಿಗೆ ಬೆದರಿಕೆ ಪತ್ರಗಳನ್ನು ಬರೆದಿದ್ದ. ಅಲ್ಲದೆ, ಈತ ಮಾವೋವಾದಿ ಸಂಘಟನೆಯ ಕಮಾಂಡರ್ ಅಭಯ್‌ಜಿ ಎಂಬಾತನ ಹೆಸರಿನಲ್ಲಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದ" ಎಂಬುದಾಗಿ ಹಿರಿಯ ಪೊಲೀಸಧಿಕಾರಿ ತಿಳಿಸಿದ್ದಾರೆ. "ಜಾರ್ಖಂಡ್‌ನ ಪಲಮವ್ ಪ್ರಾಂತ್ಯದಲ್ಲಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ಐದು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದ" ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಇಬ್ಬರಿಗೂ ರಾಜೀವ್ ಗಾಂಧಿಯವರಂತಹದ್ದೇ ಗತಿ ಕಾಣಲಿದೆ ಎಂಬುದಾಗಿ ಆತ ತನ್ನ ಪತ್ರದಲ್ಲಿ ಬೆದರಿಕೆ ಒಡ್ಡಿದ್ದ. ಆತ ಇಂತಹ ಬೆದರಿಕೆ ಒಡ್ಡಲು ಹಾಗೂ ಪತ್ರಿಕಾ ಹೇಳಿಕೆಗಳನ್ನು ನೀಡಲು ಕಾರಣ ಏನು ಎಂಬ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸಧಿಕಾರಿ ಹೇಳಿದ್ದಾರೆ.