ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತಿಯನ್ನು ಪತ್ನಿ ಸಂಶಯಿಸುವುದು ಕ್ರೌರ್ಯವಲ್ಲ: ಹೈ.ಕೋ (Wife suspect | husband | affair | cruelty)
 
ತನ್ನ ಪತಿ ಪರಸ್ತ್ರೀಯೊಂದಿಗೆ ಸಲಿಗೆಯಿಂದ ಇರುವುದನ್ನು ಯಾವ ಪತ್ನಿಯೂ ಸಹಿಸಲಾರಳು ಎಂದಿರುವ ಬಾಂಬೆ ಹೈ ಕೋರ್ಟ್ ಈ ಹಿನ್ನೆಲೆಯಲ್ಲಿ ಪತಿಯನ್ನು ಪತ್ನಿ ಸಂಶಯಿಸುವುದು ಕ್ರೌರ್ಯವಲ್ಲ ಎಂದು ಹೇಳಿದೆ. ಅಲ್ಲದೆ ಇದೇ ಕಾರಣಕ್ಕಾಗಿ ಪುಣೆಯ ಟೆಕ್ಕಿಯೊಬ್ಬ ತನ್ನ ಉಪನ್ಯಾಸಕಿ ಪತ್ನಿಗೆ ನೀಡಿದ್ದ ವಿಚ್ಛೇದನವನ್ನು ರದ್ದುಗೊಳಿಸಿದೆ. ವಿಚಾರಣಾ ನ್ಯಾಯಾಲಯ ಈ ವಿಚ್ಚೇದನ ನೀಡಿತ್ತು.

ಸಮೀರ್ ಜಾಗಡೆ(33) ಎಂಬಾತ ತನ್ನ ಪತ್ನಿ ರೂಪಾಲಿ (ಪತಿ ಪತ್ನಿಯರ ಹೆಸರು ಬದಲಿಸಲಾಗಿದೆ) ಎಂಬಾಕೆಗೆ, ಆಕೆಯ ಸಂಶಯ ಪ್ರವೃತ್ತಿಯ ಕಾರಣಕ್ಕಾಗಿ ವಿಚ್ಚೇದನ ನೀಡಿದ್ದ. ಇನ್ನೊಬ್ಬ ಮಹಿಳೆಯೊಂದಿಗಿನ ಸ್ನೇಹದ ಕುರಿತು ತನ್ನ ಪತ್ನಿ ಪದೇಪದೇ ಪ್ರಶ್ನಿಸುವುದನ್ನು ಕ್ರೌರ್ಯ ಎಂಬುದಾಗಿ ಸಮೀರ್ ನ್ಯಾಯಾಲಯದಲ್ಲಿ ಹೇಳಿದ್ದ. ಇದಲ್ಲದೆ ರೂಪಾಲಿಯು ಸಮೀರ್ ಹಾಗೂ ಆತನ ಹೆತ್ತವರ ವಿರುದ್ಧ ಗೃಹಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದೂ ಸಹ ವಿಚ್ಚೇದನಕ್ಕೆ ಕಾರಣ ಎಂಬ ವಾದವನ್ನೂ ಕುಟುಂಬ ನ್ಯಾಯಾಲಯ ಸ್ವೀಕರಿಸಿತ್ತು.

ಸಮೀರನ ಹಳೆ ಗೆಳತಿಯಾಗಿರುವ ಶುಭಾ ಎಂಬಾಕೆ ಆಕೆಯ ಪತಿಯಿಂದ ವಿಚ್ಚೇದನ ಪಡೆದ ಬಳಿಕ ತನ್ನ ಮನೆಗೆ ಪದೇಪದೇ ಭೇಟಿ ನೀಡುತ್ತಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂಬುದಾಗಿ ರೂಪಾಲಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಆದರೆ ಶುಭಾ ತಮ್ಮ ಕುಟುಂಬ ಸ್ನೇಹಿತೆ ಅಷ್ಟೇ ವಿನಹ ಬೇರೇನಿಲ್ಲ ಎಂದಿರುವ ಸಮೀರ್, ತನ್ನ ಪತ್ನಿ ಅತೀವ ಸಂಶಯ ಪ್ರವೃತ್ತಿಯವಳಾಗಿದ್ದು, ಆಕೆ ತನ್ನ ಕಚೇರಿಯ ಗೆಳೆಯರಿಗೆಲ್ಲ ಫೋನ್ ಮಾಡಿ ತನಗೂ ಶುಭಾಳಿಗೂ ಸಂಬಂಧವಿದೆಯೇ ಎಂದು ವಿಚಾರಿಸುತ್ತಿದ್ದಳು ಎಂದು ದೂರಿದ್ದಾನೆ. ಕಚೇರಿಯಲ್ಲಿ ಹೆಚ್ಚು ಕೆಲಸವಿದ್ದ ಕಾರಣ ತಡರಾತ್ರಿ ತನಕ ತಾನು ಕಚೇರಿಯಲ್ಲೇ ಇರುತ್ತಿದ್ದೆ ಎಂಬ ಸಮಜಾಯಿಷಿ ನೀಡಿದ್ದ.

ಸಮೀರ್ ಶುಭಾಳೊಂದಿಗೆ ಇಂಟರ್ನೆಟ್‌ನಲ್ಲಿ ಗಂಟೆಗಳ ಕಾಲ ಚಾಟ್ ಮಾಡುತ್ತಾನೆ ಅಲ್ಲದೆ, ಆಕೆ ಪದೇ ಪದೇ ತನ್ನ ಮನೆಗೆ ಬರುತ್ತಾಳೆ ಮತ್ತು ಸಮೀರ್ ಹಾಗೂ ಶುಭಾ ಒಂದೇ ತಟ್ಟೆಯಲ್ಲಿ ಊಟಮಾಡುವುದನ್ನೂ ತಾನು ನೋಡಿರುವುದಾಗಿ ರೂಪಾಲಿ ದೂರಿದ್ದಾಳೆ.

ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಪಿ.ಬಿ. ಮಜುಂದಾರ್ ಮತ್ತು ಆರ್.ವಿ. ಮೋರೆ ಅವರುಗಳನ್ನೊಳಗೊಂಡ ನ್ಯಾಯಪೀಠವು ರೂಪಾಲಿಯ ಸಂಶಯ ನ್ಯಾಯಯುತವಾದದ್ದು ಎಂದು ಹೇಳಿದ್ದು, ತನ್ನ ಪತಿಯು ರಾತ್ರಿ ನಿರ್ದಿಷ್ಟ ಸಮಯದೊಳಗೆ ಮನೆಗೆ ಬರಬೇಕೆಂದು ಪತ್ನಿ ಬಯಸುವುದು ಸಹಜ. ಅಲ್ಲದೆ ಪ್ರತಿನಿತ್ಯ ಪತಿಯು ಮಧ್ಯರಾತ್ರಿಯ ಬಳಿಕ ಮನೆಗೆ ಬಂದರೆ ಗಂಡನ ನಡತೆಯನ್ನು ಸಂಶಯಿಸುವುದೂ ಸಹಜ ಎಂದು ಹೇಳಿದೆ.

2002ರಲ್ಲಿ ವಿವಾಹವಾದ ಈ ಜೋಡಿಗೆ ಹೆಣ್ಣು ಮಗು ಒಂದಿದೆ. ಸಮೀರ್ ಮತ್ತು ರೂಪಾಲಿ ಮತ್ತೆ ಜತೆಯಲ್ಲಿ ಸಂಸಾರ ನಡೆಸಬೇಕು ಎಂದಿರುವ ನ್ಯಾಯಾಲಯ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವಂತೆ ಸಲಹೆ ಮಾಡಿದೆ. ಅಲ್ಲದೆ ಮಗುವಿನ ಭವಿಷ್ಯದತ್ತ ಗಮನ ಹರಿಸುವಂತೆಯೂ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ