ಒಮ್ಮೆ ಸ್ಫರ್ಧಿಸುತ್ತೇನೆ, ಮತ್ತೊಮ್ಮೆ ಇಲ್ಲ ಎಂಬುದಾಗಿ ಗಳಿಗೆಗೊಂದರಂತೆ ಹೇಳಿಕೆ ನೀಡುತ್ತಿದ್ದ ವಿದರ್ಭದ ಬಡ ಮಹಿಳೆ ಕಲಾವತಿಯ ಬದಲಿಗೆ, ಅಕ್ಟೋಬರ್ 13ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇನ್ನೊಬ್ಬ ಮಹಿಳೆಯನ್ನು ಕಣಕ್ಕಿಳಿಸಲು ವಿದರ್ಭದ ಎನ್‌ಜಿಓ ನಿರ್ಧರಿಸಿದೆ.
"ಕಲಾವತಿಯು ಅನಾರೋಗ್ಯ ಪೀಡಿತರಾಗಿದ್ದಾರೆ, ಅಲ್ಲದೆ ವಿವಿಧ ಕೋನಗಳಿಂದ ನಾಮಪತ್ರವನ್ನು ಹಿಂತೆಗೆಯುವಂತೆ ತೀವ್ರ ಒತ್ತಡ ಎದುರಿಸುತ್ತಿರುವ ಕಾರಣ ವಾನಿ ವಿಧಾನಸಭಾ ಕ್ಷೇತ್ರದಿಂದ ಅವರ ಬದಲಿಗೆ ಬಬಿತಾಯ್ ಎಂಬ ಮಹಿಳೆಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂಬುದಾಗಿ ವಿದರ್ಭ ಜನಾಂದೋಲನ ಸಮಿತಿಯ ಅಧ್ಯಕ್ಷ ಕಿಶೋರ್ ತಿವಾರಿ ಸುದ್ದಿಗಾರರಿಗೆ ಹೇಳಿದ್ದಾರೆ.
"ಕಲಾವತಿಯು ಒತ್ತಡವನ್ನು ಎದುರಿಸಬಲ್ಲರಾದರೆ ಅವರು ಸ್ಫರ್ಧಿಸಬಹುದಾಗಿದೆ. ಅವರ ವಿಧಿಯನ್ನು ಅವರೇ ನಿರ್ಧರಿಸಬೇಕು. ಆದರೆ, ಸಮಿತಿಯು ಬಡ ವಿಧವೆಯರನ್ನು ಪ್ರತಿನಿಧಿಸಲು ಬಬಿತಾಯ್ ಎಂಬ ಮಹಿಳೆಯ ನಾಮನಿರ್ದೇಶನ ಗೊಳಿಸಲು ನಿರ್ಧರಿಸಿದೆ. 2007ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಚತಾರ್ ಸಿಂಗ್ ಬೈಸ್ಎಂಬವರ ಪತ್ನಿ ಬಬಿತಾಯ್" ಎಂಬುದಾಗಿ ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಭಾಷಣ ಮಾಡಿದ್ದ ವೇಳೆ ಕಲಾವತಿಯ ಹೆಸರನ್ನು ಪ್ರಸ್ತಾಪಿಸಿದ್ದು, ಈ ಮೂಲಕ ಕಲಾವತಿ ಹೆಸರು ಬೆಳಕಿಗೆ ಬಂದಿತ್ತು.
ಕಲಾವತಿ ಶುಕ್ರವಾರ ಅಂಬ್ಯುಲೆನ್ಸ್‌ನಲ್ಲಿ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆಯಲು ಸೆಪ್ಟೆಂಬರ್ 29 ಕೊನೆಯ ದಿನಾಂವಾಗಿದೆ.