ಗುರ್ಗಾಂವ್, ಶನಿವಾರ, 26 ಸೆಪ್ಟೆಂಬರ್ 2009( 18:25 IST )
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ವರ್ಷದ 'ಯೂತ್ ಐಕಾನ್' ಎಂಬುದಾಗಿ ಹೆಸರಿಸಲಾಗಿದೆ. ಇದೇ ವೇಳೆ ನಟನಟಿಯರಾದ ಹೃತಿಕ್ ರೋಶನ್ ಹಾಗೂ ಪ್ರಿಯಾಂಕ ಚೋಪ್ರಾರನ್ನು ಮನರಂಜನಾ ಕ್ಷೇತ್ರದ 'ಯೂತ್ ಐಕಾನ್'ಗಳೆಂಬುದಾಗಿ ಪರಿಗಣಿಸಲಾಗಿದೆ.
ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರಿಯಾಂಕ ಚೋಪ್ರ ಕತ್ರಿನಾ ಕೈಫ್‌ಳನ್ನು ಹಿಂದಿಕ್ಕಿದರೆ, ಹೃತಿಕ್ ರೋಶನ್ ಅವರು ನಟ-ನಿರ್ದೇಶಕ ಫರ್ಹಾನ್ ಅಖ್ತರ್ ಅವರನ್ನು ಹಿಂದಿಕ್ಕಿದ್ದಾರೆ. ವಿಜ್‌ಕ್ರಾಫ್ಟ್ ಎಂಟರ್‌ಟೇನ್‌ಮೆಂಟ್ ಹಾಗೂ ವಿಡಿಯೋಕೋನ್ ಜಂಟಿಯಾಗಿ ಸಂಘಟಿಸಿದ್ದ ಇಂಡಿಯನ್ ಯೂತ್ ಐಕಾನ್ ಪ್ರಶಸ್ತಿ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಈ ಘೋಷಣೆ ನಡೆದಿದೆ.
ಪ್ರಶಸ್ತಿ ಸ್ವೀಕರಿಸಲು ರಾಹುಲ್ ಗಾಂಧಿ ಸಮಾರಂಭದಲ್ಲಿ ಹಾಜರಿರಲಿಲ್ಲ. ಕೆಂಪು ಹಾಸಿನಲ್ಲಿ ನಡೆದು ಬಂದ ಪ್ರಿಯಾಂಕ ಚೋಪ್ರಾ ಯೂತ್ ಐಕಾನ್ ಎಂಬುದು ಭಾರೀ ಅರ್ಥವನ್ನು ಹೊಂದಿದೆ ಎಂದು ನುಡಿದರು.
ವಾಣಿಜ್ಯ, ಕ್ರೀಡೆ, ಮನರಂಜನೆ, ಮಾಧ್ಯಮ, ಸಮಾಜ ಕಲ್ಯಾಣ, ನ್ಯಾಯಾಂಗ ಹಾಗೂ ತಂತ್ರಜ್ಞಾನದಲ್ಲಿ ಅದ್ವಿತೀಯ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.
ಇತರ ವಿಭಾಗಗಳಲ್ಲಿ ಶೂಟರ್ ಅಭಿನವ್ ಭಿಂದ್ರಾ(ಕ್ರೀಡೆ), ಚೇತನ್ ಭಗತ್(ಕಲೆ) ಹಾಗೂ ರಾಹುಲ್ ಬೋಸ್(ಸಾಮಾಜಿಕ ನ್ಯಾಯ ಹಾಗೂ ಕಲ್ಯಾಣ) ಸೇರಿದಂತೆ ಇತರರು ಪ್ರಶಸ್ತಿಗಳನ್ನು ಬಾಚಿಕೊಂಡರು.
ಐಶ್ವರ್ಯಾ ರೈಗೆ ಗ್ಲೋಬಲ್ ಫೇಸ್ ಆಫ್ ದಿ ಇಯರ್ ಪ್ರಶಸ್ತಿ ನೀಡಿದರೆ, ದೀಪಿಕಾ ಪಡುಕೋಣೆಯನ್ನು ಫ್ಯಾಶನ್ ಐಕಾನ್ ಆಫ್ ದಿ ಇಯರ್ ಎಂಬುದಾಗಿ ಗುರುತಿಸಲಾಗಿದೆ.