ತಿರುವನಂತಪುರಂ, ಭಾನುವಾರ, 27 ಸೆಪ್ಟೆಂಬರ್ 2009( 12:24 IST )
ಸುಲಭವಾಗಿ ಹಳ್ಳಕ್ಕೆ ಬೀಳುವ ಯುವತಿಯರನ್ನು ಪ್ರೀತಿಸಿ ಬಳಿಕ ಅವರನ್ನು ದೇಶದ್ರೋಹಿ ಕೃತ್ಯಕ್ಕೆ ಬಳಸಿಕೊಳ್ಳುವ ಜಿಹಾದಿ ಸಂಘಟನೆಯ ಮೋಸದ ಜಾಲಕ್ಕೆ ಬಲಿಬೀಳದಂತೆ ಎಚ್ಚರಿಕೆ ವಹಿಸಬೇಕೆಂದು ಹಿಂದೂ ಹುಡುಗಿಯರಿಗೆ ಶ್ರೀರಾಮಸೇನೆ ಮುನ್ನೆಚ್ಚರಿಕೆ ಕೊಟ್ಟಿರುವ ಪೋಸ್ಟರ್‌ಗಳು(ಭಿತ್ತಿಪತ್ರ) ಇದೀಗ ಕೇರಳದಲ್ಲಿ ರಾರಾಜಿಸತೊಡಗಿದೆ.
ಶ್ರೀರಾಮ ಸೇನೆಯ ಹೆಸರಲ್ಲಿ ಕಾಣಿಸಿಕೊಂಡಿರುವ ಈ ಪೋಸ್ಟರ್‌ಗಳ ಕುರಿತಾಗಿ ಕೇರಳ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಮಲಯಾಳಂ ಭಾಷೆಯಲ್ಲಿರುವ ಈ ಪೋಸ್ಟರ್ ಅನ್ನು ಇಲ್ಲಿನ ಎರಡು ಪ್ರಮುಖ ಮಹಿಳಾ ಕಾಲೇಜಿನ ಮುಂಭಾಗದಲ್ಲಿ ಹಚ್ಚಲಾಗಿದೆ. 'ಮೂಲಭೂತವಾದಿಗಳ ಲವ್ ಜಿಹಾದ್ ಮೋಸದ ಜಾಲಕ್ಕೆ ಹಿಂದೂ ಹುಡುಗಿಯರು ಬಲಿ ಬೀಳಬಾರದು ಎಂದು ನಾವು ಈ ಮೂಲಕ ಎಚ್ಚರಿಕೆ ನೀಡುತ್ತಿರುವುದಾಗಿ' ಹೇಳಿವೆ.
ಶ್ರೀರಾಮಸೇನೆಯ ಹೆಸರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆ ಪೂರ್ಣಗೊಳ್ಳದೆ ನಾವು ಶ್ರೀರಾಮಸೇನೆಯ ಅಸ್ತಿತ್ವ ರಾಜ್ಯದಲ್ಲಿ ಇದೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಐಜಿಪಿ ಪದ್ಮಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ಕರ್ನಾಟಕ ಮೂಲದ ಶ್ರೀರಾಮಸೇನೆ ಬಲಪಂಥೀಯ ಸಂಘಟನೆಯಾಗಿದೆ. ಕಳೆದ ವರ್ಷ ಮಂಗಳೂರಿನಲ್ಲಿ ಪಬ್‌ವೊಂದರ ಮೇಲೆ ದಾಳಿ ಮಾಡುವ ಮೂಲಕ ರಾಷ್ಟ್ರವ್ಯಾಪಿ ವಿವಾದ ಹುಟ್ಟುಹಾಕಿ, ಪ್ರಚಾರ ಗಿಟ್ಟಿಸಿಕೊಂಡಿತ್ತು.
ಲವ್ ಜಿಹಾದ್: ಇಬ್ಬರು ಎಂಬಿಎ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳು ನಾಪತ್ತೆಯಾಗಿದ್ದಾರೆಂದು ದೂರಿ ಇತ್ತೀಚೆಗೆ ಕೇರಳ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವೇಳೆ ಜಿಹಾದ್ ಲವ್ ವಿಚಾರ ಹೊರಬಂದಿರುವ ಮೂಲಕ ಪೊಲೀಸರಿಗೆ ದಿಗ್ಭ್ರಮೆ ಉಂಟು ಮಾಡಿತ್ತು. ಈ ಇಬ್ಬರು ಪಟನಂತಿಟ್ಟ ಜಿಲ್ಲೆಯ ಸೈಂಟ್ ಜೋನ್ಸ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಹಿರಿಯ ವಿದ್ಯಾರ್ಥಿಯೊಬ್ಬನೊಂದಿಗೆ ಆತ್ಮೀಯವಾಗಿದ್ದರು ಎಂದು ಹೇಳಲಾಗಿತ್ತು.
ಈ ಹುಡುಗ ಕಾಲೇಜಿನ ಆಡಳಿತಕ್ಕೆ ತಲೆನೋವಾಗಿದ್ದು, ಈತನನ್ನು ಕೆಲವು ವರ್ಷಗಳ ಹಿಂದೆ ಉಚ್ಚಾಟಿಸಲಾಗಿತ್ತು. "ಈತ ನಾಲ್ವರು ಕಿರಿಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಿದ್ದ. ಇವರಲ್ಲಿ ಈ ಇಬ್ಬರು ಎಂಬಿಎ ವಿದ್ಯಾರ್ಥಿನಿಯರೂ ಸೇರಿದ್ದು, ಇವರೊಂದಿಗೆ ಪ್ರೀತಿಯ ನಾಟಕವಾಡಿದ್ದ. ಈ ಹುಡುಗಿಯರನ್ನು ಇಸ್ಲಾಮಿಗೆ ಪರಿವರ್ತಿಸಲು ಆತ ಬಯಸಿದ್ದ ಎಂದು ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿತ್ತು. ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಗೆ ಆತನ ಉದ್ದೇಶಗಳು ಸಂಶಯ ಮೂಡಿಸಿದ್ದರೆ, ಇನ್ನೊಬ್ಬಳಲ್ಲಿ ಮಾನಸಿಕ ಸಮಸ್ಯೆ ತಲೆದೋರಿತ್ತು. ಮತ್ತಿಬ್ಬರು ಆತನನ್ನು ಪ್ರೇಮಿಸಿ ಅವನೊಂದಿಗೆ ಪರಾರಿಯಾಗಿದ್ದರು ಎಂಬುದಾಗಿ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆನ್ನಲಾಗಿತ್ತು.
ಈ ಹುಡುಗಿಯರು ನಾಪತ್ತೆಯಾದಾಗ ಅವರ ಹೆತ್ತವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಹುಡುಗಿಯರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಇವರನ್ನು ನ್ಯಾಯಾಲಯವು ಹೆತ್ತವರ ವಶಕ್ಕೊಪ್ಪಿಸಿತ್ತು. ಇವರು ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ, ತಮ್ಮನ್ನು ವ್ಯೂಹದಲ್ಲಿ ಸಿಲುಕಿಸಲಾಗಿದ್ದು, ಆತನೊಂದಿಗೆ ತೆರಳಲು ತಾವು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹುಡುಗಿಯರು ಆತನ ವಶದಲ್ಲಿದ್ದಾಗ ಒಬ್ಬಾಕೆ ಆತನನ್ನು ವಿವಾಹವಾಗಿದ್ದರೆ, ಇನ್ನೊಬ್ಬಾಕೆಗೆ ಆತನ ಸ್ನೇಹಿತ ಬಸ್ ಕಂಡಕ್ಟರ್ ಒಬ್ಬನನ್ನು ವಿವಾಹವಾಗುವಂತೆ ಒತ್ತಾಯಿಸಲಾಗಿತ್ತು. ತಮಗೆ ಹುಡುಗ ಜಿಹಾದಿ ವಿಡಿಯೋಗಳನ್ನು ತೋರಿಸಿದ್ದ ಮತ್ತು ಜಿಹಾದಿ ಸಾಹಿತ್ಯವನ್ನು ಓದಲು ನೀಡಿದ್ದ ಎಂಬುದಾಗಿ ಹುಡುಗಿಯರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಡುಗಿಯರ ಈ ಹೇಳಿಕೆಯಿಂದ ಕಳವಳಗೊಂಡಿರುವ ಹೈಕೋರ್ಟ್ ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸರಿಗೆ ತಾಕೀತು ಮಾಡಿತ್ತು.