'ಸಂಘ ಪರಿವಾರದ ಬೆಂಬಲವಿಲ್ಲದೇ ಕಾವಿ ಪಕ್ಷ ಬಿಜೆಪಿಗೆ ಅಸ್ತಿತ್ವವಿಲ್ಲ, ಆರ್‌ಎಸ್ಎಸ್ ನೀಡುವ ಮಾರ್ಗದರ್ಶನವನ್ನು ಬಿಜೆಪಿ ಪಾಲಿಸಬೇಕು' ಎಂದು ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕ ಆಚಾರ್ಯ ಧರ್ಮೇಂದ್ರ ಅವರು ಸಲಹೆ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಭಾರತೀಯ ಜನತಾಪಕ್ಷ ಆರ್ಎಸ್ಎಸ್‌ನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದಿದ್ದರೆ, ಅದರ ಅಸ್ತಿತ್ವಕ್ಕೆ ಕುತ್ತು ಬರುವುದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ತನ್ನ ಅಸ್ತಿತ್ವವನ್ನು ಸದೃಢಪಡಿಸಿಕೊಳ್ಳಬೇಕು ಎಂದ ಅವರು ಸಂಘ ಪರಿವಾರದ ಆಶೋತ್ತರಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಮಮಂದಿರದ ಬಗ್ಗೆ ಪ್ರಸ್ತಾಪಿಸಿದಾಗ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಹಿಂದುಗಳ ಭಾವನೆಗಳ ಬಗ್ಗೆ ಗೌರವ ಹೊಂದಿದ್ದಾರೆ, ಅವರು ರಾಮಮಂದಿರ ಸ್ಥಾಪನೆಗೆ ಮುಂದಾಗಿ ಮಂದಿರದ ಶಂಕುಸ್ಥಾಪನೆ ಮಾಡಿ, ಆ ಸಾಧನೆಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ದೇಶದ ವಿವಿಧೆಡೆ ರಾವಣನ ಆರಾಧನೆಗಳು ನಡೆಯುತ್ತಿರುವುದಕ್ಕೆ ಕಿಡಿಕಾರಿದ ಅವರು, ಈ ತರದ ಚಟುವಟಿಕೆಗಳು ಬೌದ್ಧಿಕ ದಿವಾಳಿತನದ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.