ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗನ್ ಸಿಎಂ ಮಾಡಿ: ಉಗ್ರರೂಪ ಪಡೆದ ಬೇಡಿಕೆ (Jag mohan Reddy | Andhra pradesh | YSR | Sonia Gandhi)
 
ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಪುತ್ರ ಮತ್ತು ಸಂಸದ ಜಗನ್ ಮೋಹನ್ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆ ಇದೀಗ ಉಗ್ರರೂಪ ತಾಳಿದ್ದು, ಅವರ ಬೆಂಬಲಿಗರು ಕಮ್ಮಂ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಾವಚಿತ್ರವಿರುವ ಬ್ಯಾನರ್ ಹರಿದು ಹಾಕಿರುವ ಘಟನೆ ಜರುಗಿದೆ.

ಪಕ್ಷದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ) ಅಧ್ಯಕ್ಷ ಡಿ.ಶ್ರೀನಿವಾಸ್ ಅವರು ಹೈದರಾಬಾದ್‌ನಿಂದ ಟೆಲಿಕಾನ್ಫರೆನ್ಸ್ ನಡೆಸುತ್ತಿದ್ದಾಗ, ಅದಕ್ಕೆ ಕಡಪ ಸಂಸದ(ಜಗನ್) ಬೆಂಬಲಿಗರು ಅಡ್ಡಿಪಡಿಸಿ, ಬ್ಯಾನರ್ ಹರಿದ ಘಟನೆ ಎರಡು ದಿನಗಳ ಹಿಂದೆಯೇ ನಡೆದಿದ್ದರೂ, ಇದನ್ನು ಸೋಮವಾರ ಟಿವಿ ಚಾನೆಲ್‌ವೊಂದು ಭಿತ್ತರಿಸಿದಾಗಲೇ ಬೆಳಕಿಗೆ ಬಂದಿತ್ತು.

ಈ ಘಟನೆಯಿಂದ ಆಕ್ರೋಶಗೊಂಡಿರುವ ಹಿರಿಯ ಕಾಂಗ್ರೆಸ್ಸಿಗರು, ಇಂತಹ ದಾಳಿಗಳ ಮೂಲಕ ಜಗನ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ವೆಂಕಟಸ್ವಾಮಿ, ಕೆ.ಕೇಶವರಾವ್, ರಾಜ್ಯಸಭಾ ಸದಸ್ಯ ವಿ.ಹನುಮಂತ ರಾವ್, ಮುಖಂಡ ಪಲ್ಲವಿ ಗೋವರ್ಧನ ರೆಡ್ಡಿ ಮುಂತಾದವರು ಘಟನೆ ಖಂಡಿಸಿ,ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಏತನ್ಮಧ್ಯೆ ಆಂಧ್ರ ಮುಖ್ಯಮಂತ್ರಿ ಕೆ.ರೋಸಯ್ಯ ಮತ್ತು ಸಂಸದ ಜಗನ್ ಸೋಮವಾರದ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ಪಿಸಿಸಿ ಅಧ್ಯಕ್ಷರೊಂದಿಗೂ ರೋಸಯ್ಯ ಚರ್ಚಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಜಗನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ